ಮಹಾರಾಷ್ಟ್ರ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರಲ್ಲಿ 65 ವರ್ಷದ ವೃದ್ದನೊಬ್ಬ ನಾಲ್ಕು ವರ್ಷದ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ, ಕಲ್ಲಿನಿಂದ ಜಜ್ಜಿ ಮಗುವನ್ನ ಕೊಲೆ ಮಾಡಿರುವ ಘೋರ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯು ಅಮಾಯಕ ಮಗುವಿನ ಮೇಲೆ ಅತ್ಯಾಚಾರ ಮಾಡಿ ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಕೊಟ್ಟಿಗೆಯೊಂದರಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯ ಹೆಸರನ್ನು ಸದ್ಯಕ್ಕೆ ಪೊಲೀಸರು ಬಹಿರಂಗಪಡಿಸಿಲ್ಲ, ಪ್ರಕರಣ ದಾಕಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಈ ಭೀಕರ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಆರೋಪಿ ಈ ಹಿಂದೆ ಕೂಡ ಇಬ್ಬರು-ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಇಂತಹದ್ದೇ ಕೃತ್ಯ ಎಸಗಿದ್ದ ಎಂಬ ಮಾಹಿತಿ ಇದೆ ಎಂದು ಶಾಸಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ವಾರವೂ ಇಂತಹ ಕನಿಷ್ಠ ಒಂದು ದುರಂತ ಘಟನೆ ಬೆಳಕಿಗೆ ಬರುತ್ತಿದೆ. ಇಂದು ಮಹಾರಾಷ್ಟ್ರದಲ್ಲಿ ಪುಟ್ಟ ಬಾಲಕಿಯರಿಗೂ ರಕ್ಷಣೆ ಇಲ್ಲದಂತಾಗಿದೆ. 2025 ರಲ್ಲಿ ರಾಜ್ಯದಲ್ಲಿ 8,643 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ ದಿನಕ್ಕೆ 24 ಅಥವಾ ಪ್ರತಿ ಗಂಟೆಗೆ ಒಂದು ಪ್ರಕರಣ ನಡೆಯುತ್ತಿದೆ. ಇದು ಮಹಾರಾಷ್ಟ್ರಕ್ಕೆ ನಾಚಿಕೆಗೇಡಿನ ಸಂಗತಿ. ಈ ಅಪರಾಧಿಗಳಿಗೆ ಮೂಗುದಾರ ಹಾಕಬೇಕಾದರೆ ‘ಶಕ್ತಿ ಕಾಯ್ದೆ’ಯನ್ನು (Shakti Act) ತಕ್ಷಣವೇ ಜಾರಿಗೊಳಿಸಬೇಕು. ಸರ್ಕಾರವು ಒಂದು ದಿನದ ವಿಶೇಷ ಅಧಿವೇಶನ ಕರೆದು ಈ ಕಾಯ್ದೆಯನ್ನು ವಿಳಂಬವಿಲ್ಲದೆ ಜಾರಿಗೆ ತರಬೇಕೆಂದು ನಾನು ವಿನಂತಿಸುತ್ತೇನೆ,” ಎಂದು ಪವಾರ್ ಆಗ್ರಹಿಸಿದ್ದಾರೆ.



