ಚೆನ್ನೈ: ವಿಮಾನ ನಿಲ್ದಾಣದಲ್ಲಿ ಚಲಿಸುತ್ತಿದ್ಙ ವೇಳೆ ಪ್ರಯಾಣಿಕನೊಬ್ಬ ವಿಮಾನದಲ್ಲಿ 2 ಬಾರಿ ವಾಂತಿ ಮಾಡಿಕೊಂಡು, ವಿಮಾನದ ತುರ್ತು ನಿರ್ಗಮನ ದ್ವಾರದಿಂದ ಹಾರಿರುವ ಘಟನೆ ನಡೆದಿದೆ.
ಇಂದು ಮುಂಜಾನೆ ಶಾರ್ಜಾ-ಚೆನ್ನೈ ಏರ್ ಅರೇಬಿಯಾ ವಿಮಾನವು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಮುಂದೆ ಚಲಿಸುತ್ತಿದ್ದಾಗ, ಪುರುಷ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲು ತೆರೆದು ಹೊರಗೆ ಹಾರಿದ್ದಾನೆ. ಇದನ್ನು ಕಂಡು ಇತರೆ ಪ್ರಯಾಣಿಕರು ಕೆಲಕಾಲ ಆತಂಕ ವ್ಯಕ್ತಪಡಿಸಿದರು.
ವಿಮಾನವು ಮುಖ್ಯ ರನ್ವೇಯಿಂದ ಹೊರಬಂದು ಟ್ಯಾಕ್ಸಿವೇಯಲ್ಲಿ ನಿಧಾನವಾಗಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಈ ಘಟನೆ ಮುಖ್ಯ ರನ್ವೇಯಲ್ಲಿ ಸಂಭವಿಸಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಪೈಲಟ್ ತಕ್ಷಣವೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ತಕ್ಷಣ ವ್ಯಕ್ತಿಯನ್ನು ವಶಕ್ಕೆ ಪಡೆದರು. ನಂತರ ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.



