Thursday, May 7, 2026
Google search engine

Homeಕ್ರೀಡೆಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು : ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್

ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು : ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್

ಹೈದರಾಬಾದ್‌ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಪಾಯಿಂಟ್ಸ್ ಟೇಬಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಅಗ್ರಸ್ಥಾನಕ್ಕೇರಿದೆ. ಬುಧವಾರ ನಡೆದ ಸೀಸನ್‌ನ 49ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 33 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಹೈದರಾಬಾದ್ ತಂಡ 11 ಪಂದ್ಯಗಳಲ್ಲಿ 7 ಜಯಗಳಿಸಿ, ಎರಡು ಸ್ಥಾನಗಳ ಜಿಗಿತದೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಇತ್ತ ಸತತ ಮೂರನೇ ಸೋಲು ಕಂಡ ಪಂಜಾಬ್ ಕಿಂಗ್ಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ತಂಡ 10 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡಿದೆ.

ಹೈದರಾಬಾದ್ ಬ್ಯಾಟಿಂಗ್ ಅಬ್ಬರ: 235 ರನ್‌ಗಳ ಬೃಹತ್ ಮೊತ್ತ

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು.

ಅಭಿಷೇಕ್ ಶರ್ಮಾ (35 ರನ್, 13 ಎಸೆತ) ಮತ್ತು ಟ್ರೆವಿಸ್ ಹೆಡ್ (38 ರನ್, 19 ಎಸೆತ) ಮೊದಲ ವಿಕೆಟ್‌ಗೆ ಕೇವಲ 21 ಎಸೆತಗಳಲ್ಲಿ 54 ರನ್‌ಗಳ ಜೊತೆಯಾಟ ನೀಡಿದರು.

ನಂತರ ಇಶಾನ್ ಕಿಶನ್ (55 ರನ್, 32 ಎಸೆತ) ಮತ್ತು ಹೆನ್ರಿಕ್ ಕ್ಲಾಸೆನ್ (69 ರನ್, 43 ಎಸೆತ) ಮೂರನೇ ವಿಕೆಟ್‌ಗೆ 88 ರನ್ ಸೇರಿಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದರು.

ಕೊನೆಯಲ್ಲಿ ನಿತೀಶ್ ರೆಡ್ಡಿ ಕೇವಲ 13 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿ ತಂಡದ ಮೊತ್ತವನ್ನು 235ಕ್ಕೆ ತಲುಪಿಸಿದರು.

ಪಂಜಾಬ್ ಪರ ಅರ್ಷ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಹಾಲ್ ಮತ್ತು ವಿಜಯ್‌ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು.

ಪಂಜಾಬ್ ಕಿಂಗ್ಸ್ ಹೋರಾಟ ಮತ್ತು ಸೋಲು

ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಆರಂಭ ಆಘಾತಕಾರಿಯಾಗಿತ್ತು; ಕೇವಲ 4 ರನ್ ಆಗುವಷ್ಟರಲ್ಲಿ ಇಬ್ಬರು ಆರಂಭಿಕ ಆಟಗಾರರು ಪೆವಿಲಿಯನ್ ಸೇರಿದ್ದರು.

ಕೂಪರ್ ಕಾನ್ಲಿ ಶತಕ: ಪಂಜಾಬ್ ಪರ ಏಕಾಂಗಿ ಹೋರಾಟ ನಡೆಸಿದ ಕೂಪರ್ ಕಾನ್ಲಿ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು. ಅವರು 59 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 107 ರನ್ ಗಳಿಸಿ ಅಜೇಯರಾಗಿ ಉಳಿದರು.

ಮಾರ್ಕಸ್ ಸ್ಟೋಯಿನಿಸ್ (28) ಮತ್ತು ಸೂರ್ಯಾಂಶ್ ಶೇಡ್ಗೆ (25) ಸ್ವಲ್ಪ ಮಟ್ಟಿನ ಸಾಥ್ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಹೈದರಾಬಾದ್ ಪರ ಶಿವಾಂಗ್ ಕುಮಾರ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರೆ, ನಿತೀಶ್ ರೆಡ್ಡಿ, ಇಶಾನ್ ಮಾಲಿಂಗ ಮತ್ತು ಸಾಕಿಬ್ ಹಸನ್ ತಲಾ ಒಂದು ವಿಕೆಟ್ ಹಂಚಿಕೊಂಡರು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular