ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಮಂತ್ರಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿಯಯನ್ನು ಸರಿಪಡಿಸಲಾಗದ ಅಸಹಾಯಕತೆ ಇತ್ತು. ತನ್ನ ಎಲೆ ಮೇಲೆ ಆನೆ ಸತ್ತು ಬಿದ್ದಿದ್ದರೂ ಎದುರಿನವರ ಎಲೆ ಮೇಲೆ ಸತ್ತುಬಿದ್ದ ನೊಣವನ್ನು ಹುಡುಕಾಡುವ ಢೋಂಗಿ ಬುದ್ಧಿಯೂ ಅವರ ಭಾಷಣದಲ್ಲಿ ಇತ್ತು ಎಂದು ಟೀಕಿಸಿದರು.
ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರೂ ಸೇರಿದಂತೆ ದೇಶದ ಪ್ರಧಾನಮಂತ್ರಿಯಾದವರು ಎಂದೂ ಕೆಟ್ಟ ರಾಜಕಾರಣಿಗಳ ರೀತಿ ಬೀದಿ ಭಾಷಣ ಮಾಡಿ ವಿರೋಧಪಕ್ಷಗಳನ್ನು ಹಳಿಯಲು ಹೋಗಿಲ್ಲ. ಅವರೆಲ್ಲರೂ ಕಾಪಾಡಿಕೊಂಡು ಬಂದಿದ್ದ ಪ್ರಧಾನಿ ಕುರ್ಚಿಯ ಘನತೆ, ಗಾಂಭಿರ್ಯ ಮತ್ತು ಔಚಿತ್ಯವನ್ನು ನರೇಂದ್ರ ಮೋದಿಯವರು ತಮ್ಮ ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷಾಸೂಯೆಗಳನ್ನು ವ್ಯಕ್ತಪಡಿಸುವ ಭಾಷಣಗಳ ಮೂಲಕ ಮಣ್ಣುಪಾಲು ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಮೋದಿಯವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ರ್ಯಾಲಿಗಳ ಗುಂಗಿನಲ್ಲಿಯೇ ಇದ್ದಂತೆ ಕಂಡರು.
2024-25ರಲ್ಲಿಯೇ ಭಾರತವನ್ನು 5 ತ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವೆ ಎಂದು ಕೊಚ್ಚಿಕೊಂಡಿದ್ದ, ಭಾರತದ ಅಭಿವೃದ್ದಿ ರಥ ನಾಗಾಲೋಟದಿಂದ ಮುಂದೋಡುತ್ತಿದೆ ಎಂದು ಬೀಗಿದ್ದ ಮತ್ತು ದೇಶದ ಬಡತನವನ್ನು ನಿರ್ಮೂಲನೆ ಮಾಡಿ ಆಗಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದ ಪ್ರಧಾನಿಯವರು ಈಗ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮತ್ತು ಖಾದ್ಯ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ಮಾಡಬೇಡಿ ಮತ್ತು ಗೊಬ್ಬರ ಬಳಕೆ ತಗ್ಗಿಸಿ ಎಂದು ಬೇಡಿಕೊಳ್ಳುತ್ತಿರುವುದು ಯಾವ ಅಭಿವೃದ್ದಿಯ ಲಕ್ಷಣ ಎನ್ನುವುದನ್ನು ಮೋದಿಯವರೇ ಸ್ಪಷ್ಟಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂತಹ ಪರಿಸ‍್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎನ್ನುವುದನ್ನು ಅರಿತುಕೊಳ್ಳುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದ ನಡುವೆ ಭಾರತ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ ಭಾರತ ಇಂದಿನ ದುಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಮೋದಿಯವರೇ, ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? ಜವಾಹರಲಾಲ್ ನೆಹರೂ ಅವರನ್ನೇ? ಕಾಂಗ್ರೆಸ್ ಪಕ್ಷವನ್ನೇ? ಉತ್ತರಿಸಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ದೇಶದ ತಲಾವಾರು ಆದಾಯ ರೂ.2.11 ಲಕ್ಷ ರೂ.ಗಳಾಗಿದ್ದರೆ ಕರ್ನಾಟಕದ್ದು 4.33 ಲಕ್ಷ ರೂಪಾಯಿಗಳು. ದೇಶದ ಜಿಡಿಪಿ ಬೆಳವಣಿಗೆಯ ದರ ಶೇಕಡಾ 7.4 ಆಗಿದ್ದರೆ, ಕರ್ನಾಟಕದ್ದು ಶೇಕಡಾ 8.1 ಆಗಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇಕಡಾ 9.19 ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ್ದೇ ಅತ್ಯಧಿಕ ಪಾಲು.
ಪ್ರಧಾನಿಗಳೇ, ಕರ್ನಾಟಕವು ಅಭಿವೃದ್ದಿಯ ಪಥದಲ್ಲಿ ವೇಗದಲ್ಲಿ ಸಾಗುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು? ಮುಂದಿನ ಬಾರಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸ್ವಲ್ಪ ಪೂರ್ವ ತಯಾರಿ ಮಾಡಿಕೊಂಡು ಬನ್ನಿ. ದೇಶದ ಪ್ರಧಾನಿಯವರ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆಯಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿಯವರು ತಮ್ಮ ಪಕ್ಷದ ವಿಶ್ವಾಸದ್ರೋಹದ ಚರಿತ್ರೆಯನ್ನು ಒಮ್ಮೆ ನೆನಪು ಮಾಡಿಕೊಂಡಿದ್ದರೆ ಅವರು ಖಂಡಿತ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸದ್ರೋಹದ ಆರೋಪವನ್ನು ಮಾಡುತ್ತಿರಲಿಲ್ಲ. ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಎಐಡಿಎಂಕೆ, ಪಿಡಿಪಿ, ಶಿವಸೇನೆ, ಅಕಾಲಿದಳ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ವಿಶ್ವಾಸದ್ರೋಹಕ್ಕೊಳಗಾದ ಪ್ರಾದೇಶಿಕ ಪಕ್ಷಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಬ್ಲಾಕ್ ಮೇಲ್ ಮಾಡಿ ಅವರು ತಮ್ಮ ಪಕ್ಷಗಳಿಗೆ ವಿಶ್ವಾಸದ್ರೋಹ ಎಸಗುವಂತೆ ಮಾಡಿ, ಜೊತೆಯಲ್ಲಿ ಸೇರಿಸಿಕೊಂಡ ವಿರೋಧ ಪಕ್ಷದ ನಾಯಕರ ಪಟ್ಟಿಯೂ ಬೆಳೆಯುತ್ತಿದೆ. ಇಂತಹ ವಿಶ್ವಾಸದ್ರೋಹಿ ಪಕ್ಷದ ನಾಯಕರಾದ ಮೋದಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ ವಿಶ್ವಾಸದ್ರೋಹದ ಆರೋಪ ಮಾಡುತ್ತಿರುವುದನ್ನು ನೋಡಿ ದೇಶದ ಜನರೇ ಅಪಹಾಸ್ಯ ಮಾಡುತ್ತಿದ್ದಾರೆ.
ಕರ್ನಾಟಕದ ಬಿಜೆಪಿಯ ಸ್ಥಿತಿ ಬುಟ್ಟಿಯಲ್ಲಿ ಕೂಡಿ ಹಾಕಿರುವ ಏಡಿಗಳಂತಾಗಿದೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡು ರಾಜಕೀಯ ಹರಾಕಿರಿ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಎದುರಾಗಿ ಪಕ್ಷದೊಳಗೆ ಅರ್ಧ ಡಜನ್ ಗುಂಪುಗಳಿವೆ. ಈ ಗುಂಪುಗಳ ನಾಯಕರು ಯಡಿಯೂರಪ್ಪ ವಿರುದ್ಧ ನೂರಾರು ಆರೋಪಗಳನ್ನು ಮಾಡಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ‍್ಳುವ ಧೈರ್ಯ 56 ಇಂಚಿನ ಎದೆಯಳತೆಯ ನಾಯಕರಲ್ಲಿ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೆ ಆ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ಲೇವಡಿ ಮಾಡಿದರು.
ಪಕ್ಷವೇ ಅಮಾನತುಗೊಳಿಸಿದ್ದ ನಾಯಕರ ಕಾಲಿಗೆಬಿದ್ದು ಕರೆತಂದು ಚುನಾವಣಾ ಪ್ರಚಾರ ಮಾಡುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿಯ ಸ್ಥಿತಿ ಕೆಟ್ಟುಹೋಗಿದೆ. ಇಂತಹವರು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಹೇಳಲು ಹೊರಟಿದ್ದಾರೆ. ಪ್ರಧಾನಿಯವರೇ ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.



