ಮೈಸೂರು: ವಿದ್ಯಾರ್ಥಿ ಜೀವನವು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಈ ಅವಧಿಯಲ್ಲಿ ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ ಕೆ-ಸೆಟ್ ಮತ್ತು ಯುಜಿಸಿ- ನೆಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರವನ್ನು ಕಾವೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮೂರು ‘ಖಿ’ ಸೂತ್ರಗಳನ್ನು ಅಳವಡಿಸಿ ಕೊಳ್ಳುವುದು ಬಹಳ ಮುಖ್ಯ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಿರಂತರವಾಗಿ ಪ್ರಯತ್ನಿಸಿ, ನಿಮ್ಮ ಮೇಲೆ ನಿಮಗೆ ಮೊದಲು ನಂಬಿಕೆ ಇರಲಿ. ಸೋಲುಗಳಿಗೆ ಎದೆಗುಂದದೆ ಗುರಿಯತ್ತ ಸಾಗಿ, ನೀವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಪ್ರತಿಯೊಬ್ಬರಿಗೂ ದಿನಕ್ಕೆ 24 ಗಂಟೆಯೇ ಇರುತ್ತದೆ. ಆ ಸಮಯವನ್ನು ಯಾರು ಹೇಗೆ ವಿವೇಚನೆಯಿಂದ ಬಳಸಿಕೊಳ್ಳುತ್ತಾರೆ ಎಂಬುದು ಅವರ ಯಶಸ್ಸನ್ನು ನಿರ್ಧರಿಸುತ್ತದೆ. ಛಲ ಇರಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಇರಬೇಕು. ಬರೀ ಮನೋರಂಜನೆಗೆ ಅಂಟಿಕೊಳ್ಳದೆ, ಓದು ಮತ್ತು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿದರು.
ತಂತ್ರಜ್ಞಾನ ಮತ್ತು ಸಂಶೋಧನೆ ವಿದ್ಯಾರ್ಥಿಗಳು ಇತ್ತೀಚಿನ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ತಿಳಿದಿರಬೇಕು. ಆದರೆ, ಸಂಶೋಧನೆ ಮತ್ತು ಓದಿನ ವಿಷಯದಲ್ಲಿ ಅತಿಯಾಗಿ ಅದರ ಮೇಲೆ ಅವಲಂಬಿತರಾಗಬಾರದು. ಸ್ವಂತ ಪರಿಶ್ರಮದಿಂದ ಸಿದ್ಧಪಡಿಸಿದ ಜ್ಞಾನವಷ್ಟೇ ದೀರ್ಘಕಾಲ ಉಳಿಯುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಹೊಂದಬಾರದು. ಛಲ ಮತ್ತು ಧೈರ್ಯವಿದ್ದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಜಯ ಸಾಧಿಸಬಹುದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಮಹನೀಯರ ಜೀವನ ನಮಗೆ ಸದಾ ದಾರಿದೀಪವಾಗಬೇಕು.ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರವಿದ್ದು, ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಎಂದು ಹೇಳಿರು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಮಾತನಾಡಿ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಹೇರಳವಾಗಿವೆ. ಆದರೆ, ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಯಾವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಸರಿಯಾದ ಮಾರ್ಗದರ್ಶನ ಯಶಸ್ಸಿಗೆ ಅತಿ ಮುಖ್ಯ ಎಂದು ಹೇಳಿದರು.
ಆಡಳಿತ ತರಬೇತಿಯ ಸಂಸ್ಥೆಯ ಜಂಟಿ ನಿರ್ದೇಶಕ ಆರ್.ಸತ್ಯಶ್ರೀ ಮಾತನಾಡಿ ಸಮಯದ ನಿರ್ವಹಣೆಯೇ ಯಶಸ್ಸಿನ ಮೆಟ್ಟಿಲು ಪ್ರತಿಯೊಬ್ಬ ವ್ಯಕ್ತಿಗೂ ದಿನದ 24 ಗಂಟೆಗಳು ಸಮಾನವಾಗಿರುತ್ತವೆ. ಆದರೆ ಯಾರು ಆ ಸಮಯವನ್ನು ಶಿಸ್ತಿನಿಂದ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು ಮೊಬೈಲ್ ಮತ್ತು ಅನಗತ್ಯ ವಿಷಯಗಳಿಗೆ ಸಮಯ ವ್ಯಯಿಸದೆ. ತಮ್ಮ ಪಠ್ಯ ಮತ್ತು ಕೌಶಲ್ಯದ ಅಭಿವೃದ್ಧಿಗೆ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್.ಆನಂದಕುಮಾರ್, ಶೈಕ್ಷಣಿಕ ಡೀನ್ ಪ್ರೊ.ಎಂ.ರಮಾನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್ ಡಾ.ಎನ್.ಆರ್.ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯ ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.



