ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ದೈತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಒಡೆತನ ಹೊಂದಿರುವ ಮಾರ್ಕ್ ಜುಕರ್‌ಬರ್ಗ್ ಅವರ ‘ಮೆಟಾ’, ಸುಮಾರು 8,000 ಉದ್ಯೋಗಿಗಳನ್ನು ತೆಗೆದುಹಾಕಿದೆ.
ಈ ವಜಾಗಳು ದಕ್ಷತೆಯನ್ನು ಸುಧಾರಿಸುವ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಮರುರಚನೆಯ ಭಾಗವಾಗಿದೆ. ಇದರೊಂದಿಗೆ ಕಂಪನಿಯು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಬುಧವಾರ ಮುಂಜಾನೆಯಿಂದಲೇ ಕಂಪನಿಯು ವಿಶ್ವದಾದ್ಯಂತ ಉದ್ಯೋಗಿಗಳಿಗೆ ಸೂಚನೆ ನೀಡಲು ಪ್ರಾರಂಭಿಸಿದೆ. ಏಷ್ಯಾದ ಹಬ್ ಆಗಿರುವ ಸಿಂಗಾಪುರದ ಉದ್ಯೋಗಿಗಳಿಗೆ ಸ್ಥಳೀಯ ಕಾಲಮಾನ ಬೆಳಿಗ್ಗೆ 4 ಗಂಟೆಗೆ ಈ ನೋಟಿಸ್ ತಲುಪಿದೆ. ಯುರೋಪ್ ಮತ್ತು ಅಮೆರಿಕದ ಸಿಬ್ಬಂದಿಗೂ ಅವರವರ ಸಮಯ ವಲಯದಲ್ಲಿ ಶೀಘ್ರದಲ್ಲೇ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಆಂತರಿಕ ಮೆಮೊ ತಿಳಿಸಿದೆ.
ಜಾಗತಿಕವಾಗಿ ಸುಮಾರು 8,000 ಹುದ್ದೆಗಳನ್ನು ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಈ ಬಾರಿಯ ವಜಾಗಳು ಮುಖ್ಯವಾಗಿ ಮೆಟಾದ ಎಂಜಿನಿಯರಿಂಗ್ ಮತ್ತು ಉತ್ಪನ್ನ ತಂಡಗಳ ಮೇಲೆ ಪರಿಣಾಮ ಬೀರಲಿದೆ. ಈ ವರ್ಷದ ನಂತರದ ಅವಧಿಯಲ್ಲಿ ಹೆಚ್ಚಿನ ಉದ್ಯೋಗ ಕಡಿತಗಳು ಉಂಟಾಗಬಹುದು ಎಂದು ಕಂಪನಿಯ ಯೋಜನೆಗಳ ಬಗ್ಗೆ ತಿಳಿದಿರುವ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕೃತಕ ಬುದ್ಧಿಮತ್ತೆಯನ್ನು ಕಂಪನಿಯ ಪ್ರಮುಖ ಆದ್ಯತೆಯನ್ನಾಗಿ ಮಾಡಿದ್ದಾರೆ. ಆಲ್ಫಾಬೆಟ್‌ನ ಗೂಗಲ್ ಮತ್ತು ಓಪನ್ ಎಐ ನಂತಹ ಪ್ರತಿಸ್ಪರ್ಧಿಗಳೊಂದಿಗೆ ಸರಿಸಮನಾಗಿ ಸ್ಪರ್ಧಿಸಲು ಎಲ್ಲಾ ಸಂಪನ್ಮೂಲಗಳನ್ನು ಅದಕ್ಕೇ ಮೀಸಲಿಡುತ್ತಿದ್ದಾರೆ. ಇದು ಮೆಟಾದ ಉದ್ಯೋಗಿಗಳ ಸಂಖ್ಯೆ ಮತ್ತು ಕಾರ್ಯನಿರ್ವಹಣೆಯ ರೀತಿಯಲ್ಲಿ ಬದಲಾವಣೆಗಳನ್ನು ತಂದಿದೆ.
ಮೆಟಾದ ಈ ಆಕ್ರಮಣಕಾರಿ ಎಐ ಹೂಡಿಕೆಯು ಹೂಡಿಕೆದಾರರಲ್ಲಿ ಆತಂಕವನ್ನು ಮೂಡಿಸಿದೆ. ಕಂಪನಿಯ ಹೂಡಿಕೆಗಳು ಅಂತಿಮವಾಗಿ ಫಲ ನೀಡದಿರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮೆಟಾ ಈ ವಜಾಗಳನ್ನು ತನ್ನ ಪ್ರಮುಖ ಎಐ ಹೂಡಿಕೆಗಳ ವೆಚ್ಚವನ್ನು “ಸರಿಹೊಂದಿಸಲು” ಒಂದು ಅವಕಾಶವಾಗಿ ಬಿಂಬಿಸುತ್ತಿದ್ದರೂ, ಎವರ್‌ಕೋರ್ ವಿಶ್ಲೇಷಕರ ಅಂದಾಜಿನ ಪ್ರಕಾರ ಈ ಕಡಿತಗಳಿಂದ ಕೇವಲ 3 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ ಅಷ್ಟೆ. ಇದು ಈ ವರ್ಷ ಮೆಟಾದ ಅಂದಾಜು ಬಂಡವಾಳ ವೆಚ್ಚವಾದ 145 ಬಿಲಿಯನ್ ಡಾಲರ್‌ನ ಒಂದು ಸಣ್ಣ ಭಾಗವಾಗಿದೆ.



