ಮೈಸೂರು: ಯುವ ಪೀಳಿಗೆಯು ಹಿರಿಯರು, ಮಹಾನೀಯರು ಮತ್ತು ಸಾಧಕರ ಜೀವನದ ಅನುಭವಗಳನ್ನು ಅರಿತು, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಸಿ. ಎನ್. ಮಂಜೇಗೌಡ ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತೋತ್ಸವ ಸಮಿತಿ ವತಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರವು ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದ ಬುದ್ಧಿವಂತರು ಹಾಗೂ ಸಾಧಕರನ್ನು ಒಂದೇ ವೇದಿಕೆಗೆ ತರುತ್ತಿದೆ. ಸಾಧಕರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳು ಹಾಗೂ ಅದರಿಂದ ಪಡೆದ ಯಶಸ್ಸಿನ ಫಲವನ್ನು ಇಂತಹ ವೇದಿಕೆಗಳ ಮೂಲಕ ಹಂಚಿಕೊಂಡಾಗ, ಅದು ಕೇಳುಗರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಶಾಲೆಗಳಲ್ಲಿ ಶಿಕ್ಷಕರು ಮತ್ತು ಪಠ್ಯಪುಸ್ತಕಗಳು ಇಲ್ಲದಿದ್ದರೆ ಶಿಕ್ಷಣ ಸಾಧ್ಯವಾಗುತ್ತಿರಲಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದ ಗಟ್ಟಿ ವ್ಯಕ್ತಿಗಳ ಸಾಧನೆಗಳನ್ನು ನಾವು ಸದಾ ಅನುಸರಿಸಬೇಕು
ಸಮಾಜವನ್ನು ಉತ್ತಮ ಹಾದಿಗೆ ತರಬೇಕಾದರೆ ಇಂತಹ ವೈಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಉತ್ತಮ ಚಲನಚಿತ್ರಗಳನ್ನು ವೀಕ್ಷಿಸುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು ಮತ್ತು ದಿನಪತ್ರಿಕೆ ಹಾಗೂ ದೂರದರ್ಶನದಲ್ಲಿನ ಸುದ್ದಿಗಳನ್ನು ಗಮನಿಸುವುದು ಅತ್ಯಂತ ಅಗತ್ಯ. ಇವು ಮನುಷ್ಯನಲ್ಲಿ ದೊಡ್ಡ ವೈಚಾರಿಕ ಬದಲಾವಣೆ ತರಬಲ್ಲವು ಎಂದು ಹೇಳಿದರು.
ಸತ್ಯ ಹರಿಶ್ಚಂದ್ರ ಮತ್ತು ಶ್ರೀರಾಮರಂತಹ ಮಹಾಪುರುಷರು ಸಮಾಜಕ್ಕಾಗಿ ಅನುಭವಿಸಿದ ಕಷ್ಟಗಳಿಗಿಂತ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಅವರು ತಂದ ಬದಲಾವಣೆಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಯುವ ಪೀಳಿಗೆಗೆ ಸಾಧಕರ ಕಷ್ಟಗಳಷ್ಟೇ ಅಲ್ಲದೆ, ಅವರ ಸಾಧನೆಯ ಹಿಂದಿರುವ ಆಶಯಗಳನ್ನು ತಿಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷರಾದ ಡಾ. ವಾಮದೇವರು ಅವರು ಮಾತನಾಡಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗವು ನೋಂದಣಿಯಾಗಿ ಕಳೆದ ಎಂಟು ವರ್ಷಗಳಿಂದ ಮೈಸೂರಿನಲ್ಲಿ ನಿರಂತರವಾಗಿ ಸಕ್ರಿಯವಾಗಿದೆ. ಕರ್ನಾಟಕ ಸರ್ಕಾರವು 2017 ರಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಅಂದಿನಿಂದ ಪ್ರತಿ ವರ್ಷ ಮೇ ಮಾಹೆಯಲ್ಲಿ ಈ ಜಯಂತ್ಯುತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಮಾಜ, ನಾಡು ಮತ್ತು ದೇಶಕ್ಕಾಗಿ ಶ್ರಮಿಸಿದ ಮಹನೀಯರ ಸಾಧನೆ, ಅವರು ನೀಡಿದ ಕೊಡುಗೆಗಳು ಹಾಗೂ ಸಂದೇಶಗಳನ್ನು ಸಾರ್ವಜನಿಕರಿಗೆ ಮತ್ತು ಯುವ ಪೀಳಿಗೆಗೆ ತಲುಪಿಸುವುದು ಈ ಜಯಂತಿಗಳ ಮುಖ್ಯ ಉದ್ದೇಶವಾಗಿದೆ. ಈ ಸಂದೇಶಗಳನ್ನು ಜನರು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಜೆ.ಎಸ್. ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾದ ಪುಷ್ಪಲತಾ.ಜೆ ಅವರು ಉಪನ್ಯಾಸ ನೀಡಿ ಮಾತನಾಡಿದರು. ಮಲ್ಲಮ್ಮನ ಚರಿತ್ರೆಯು ದ್ಯಾಂಪುರ ಚೆನ್ನಕವಿಗಳು ಬರೆದಿರುವ ಕೃತಿಯಾಗಿದ್ದು, ಇದನ್ನು ಗೋರು ಚನ್ನಬಸಪ್ಪನವರು ಹೊಸಗನ್ನಡ ಗದ್ಯಾನುವಾದದಲ್ಲಿ ನೀಡಿದ್ದಾರೆ. ಇದು ಸಾಧ್ವಿ ಶಿರೋಮಣಿಯಾದ ಗೃಹಿಣಿಯ ಜೀವನದ ಪಾವಿತ್ರ್ಯತೆಯನ್ನು ಪರಿಚಯಿಸುವ ಕೃತಿಯಾಗಿದೆ ಎಂದು ಹೇಳಿದರು.
ಮಲ್ಲಮ್ಮ ಕೇವಲ ಪುರಾಣದ ವ್ಯಕ್ತಿಯಲ್ಲ, ಬದಲಿಗೆ ಚಾರಿತ್ರಿಕ ವ್ಯಕ್ತಿಯಾಗಿದ್ದಳು. ಇದಕ್ಕೆ ಪೂರಕವಾಗಿ ಮದರಾಸಿನ ಓರಿಯಂಟಲ್ ಲೈಬ್ರರಿಯಲ್ಲಿ ಸಿಗುವ ದಾಖಲೆಗಳ ಪ್ರಕಾರ, ಹೇಮಾರಡ್ಡಿ ಮತ್ತು ಮಲ್ಲಮ್ಮನವರು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಕಾರ್ಯಗಳನ್ನು ನೆರವೇರಿಸಿದ್ದಾರೆ ಎಂಬ ಉಲ್ಲೇಖವಿದೆ. ಮಲ್ಲಮ್ಮನ ಸಾತ್ವಿಕ ಗುಣವನ್ನು ಸಹಿಸದ ಅವಳ ಒರಗಿತ್ತಿಯರು ಕುತಂತ್ರ ನಡೆಸಿ, ಅವಳನ್ನು ದನ ಕಾಯಲು ಕೊಟ್ಟಿಗೆಗೆ ಹಾಕಿಬಿಡುತ್ತಾರೆ. ಕೊಟ್ಟಿಗೆಯಲ್ಲೇ ಜೀವನ ನಡೆಸುತ್ತಾ, ಹಸು-ಕರುಗಳನ್ನು ನೋಡಿಕೊಳ್ಳುವ ಅವಳಿಗೆ ಕೇವಲ ಒಣಗಿದ ಮತ್ತು ಉಳಿದ ಅಕ್ಕಿಯ ಅನ್ನ ಅಳಸಿದ್ದು, ಉಳಿದದ್ದು ಮಾತ್ರ ಆಹಾರವಾಗಿ ಸಿಗುತ್ತಿತ್ತು. ಅವಳಿಗೆ ಯಾವುದೇ ಒಳ್ಳೆಯ ಬಟ್ಟೆ, ಒಡವೆ ಅಥವಾ ಕೈಗೆ ಬಳೆಗಳಿರಲಿಲ್ಲ ಎಂದರು.
ಮಲ್ಲಮ್ಮ ತನ್ನ ಶಾಂತ ಹಾಗೂ ತಾಳ್ಮೆಯ ಮನಸ್ಸಿನಿಂದಲೇ ಎಲ್ಲಾ ಕಷ್ಟಗಳನ್ನು ಎದುರಿಸಿ, ಪರಿಸರವನ್ನು ಬದಲಾಯಿಸಬಲ್ಲ ಶಕ್ತಿಯನ್ನು ಹೊಂದಿದ್ದಳು, ನಿಂದಿಸುವವರ ಮತ್ತು ಕುತಂತ್ರ ಮಾಡುವವರ ನಡುವೆಯೂ ಮಲ್ಲಮ್ಮನು ತನ್ನ ಶಿವಧ್ಯಾನ ಮತ್ತು ಪ್ರಶಾಂತತೆಯಿಂದ ದೂಷಣೆಯ ದುಸ್ಥಿತಿಯನ್ನೇ ಸುಸ್ಥಿತಿಗೆ ಬದಲಾಯಿಸಿಕೊಂಡಳು. ನಾವೂ ಸಹ ಸಣ್ಣಪುಟ್ಟ ಟೀಕೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸದೆ , ಮಲ್ಲಮ್ಮನಂತೆ ಪರಿಸ್ಥಿತಿಯನ್ನು ಪ್ರಶಾಂತ ಮನಸ್ಸಿನಿಂದ ಸ್ವೀಕರಿಸಿ, ನಮ್ಮ ಸತ್ಕರ್ಮಗಳ ಮೂಲಕವೇ ಸಮಾಜಕ್ಕೆ ಮಾದರಿಯಾದರು ಎಂದು ಹೇಳಿದರು.
ಸಾಧ್ವಿಮಣಿಯರ ಕಥೆಗಳನ್ನು ಕೇವಲ ಕೇಳುವುದಷ್ಟೇ ಅಲ್ಲ, ಅವರ ಜೀವನದ ಅದ್ಭುತ ಪವಾಡಗಳನ್ನು ಬದಿಗಿಟ್ಟು, ಅವರು ತೋರಿದ ತತ್ವಗಳು ಹಾಗೂ ಮನಸ್ಸಿನ ಪ್ರಶಾಂತತೆಯನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಯೋಚಿಸಬೇಕು. ಜಗತ್ತನ್ನು ಬದಲಾಯಿಸುವ ಮುನ್ನ ನಮ್ಮ ಸ್ವಂತ ಮನೆ ಹಾಗೂ ಕುಟುಂಬದ ನಾಲ್ಕು ಜನರನ್ನು ಪ್ರೀತಿ ಮತ್ತು ಗೌರವದಿಂದ ಗೆಲ್ಲುವುದು ಮುಖ್ಯ. ನಮ್ಮ ನಡವಳಿಕೆಯಲ್ಲಿ ಪ್ರಾಮಾಣಿಕತೆ ಇದ್ದಾಗ ಮಾತ್ರ ಸಮಾಜದಲ್ಲಿ ಗೌರವ ರಾಜಮನ್ನಣೆ ಹಾಗೂ ಗುರುಗಳ ಶ್ರೀರಕ್ಷೆ ಸಿಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಸಿ.ಇ. ಟಿ. ಆರ್. ಟಿ ನ ಹಿರಿಯ ವಿಜ್ಞಾನಿಗಳಾದ ಡಾ. ತಿಪ್ಪೇಸ್ವಾಮಿ, ಹೇಮರೆಡ್ಡಿ ಮಲ್ಲಮ್ಮ ಬಳಗದ ಉಪಾಧ್ಯಕ್ಷರಾದ ಶಾರದಾ ಶಿವಲಿಂಗ ಸ್ವಾಮಿ, ಕಾರ್ಯದರ್ಶಿಗಳಾದ ಡಾ.ವಿಠಲ್ ಚುಳಿಕಿ, ಮಹಾಂತೇಶ್ .ಟಿ ಮತ್ತಿತರರು ಉಪಸ್ಥಿತರಿದ್ದರು.



