ಮೈಸೂರು: ಹಿಂದಿನ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮಾಡಿದ್ದ ಮೀಸಲಾತಿ ಹೆಚ್ಚಳವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಸಿದುಕೊಳ್ಳುವ ಮೂಲಕ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ೩೦ ವರ್ಷಗಳ ನಿರಂತರ ಹೋರಾಟ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಆಧಾರದ ಮೇಲೆ, ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ದೃಢ ನಿರ್ಧಾರ ಕೈಗೊಂಡು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.೧೫ ರಿಂದ ಶೇ.೧೭ಕ್ಕೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.೩ರಿಂದ ಶೇ.೭ಕ್ಕೆ ಹೆಚ್ಚಿಸಿತ್ತು. ಈ ನಿರ್ಧಾರಕ್ಕೆ ಅಂದು ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿ ಸರ್ವಪಕ್ಷಗಳೂ ಒಮ್ಮತದ ಬೆಂಬಲ ಸೂಚಿಸಿದ್ದವು. ಆದರೆ, ಕಾಂಗ್ರೆಸ್ ಸರ್ಕಾರ ಈ ಮೀಸಲಾತಿ ಸೌಲಭ್ಯ ಕಸಿದುಕೊಳ್ಳುವ ಕೆಲಸ ಮಾಡಿದೆ ಎಂದು ಕಿಡಿಕಾರಿದರು.
ಮೀಸಲಾತಿ ಹೆಚ್ಚಳದ ವಿರುದ್ಧ ರಾಯಚೂರಿನ ಕಾಂಗ್ರೆಸ್ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದಾಗ, ರಾಜ್ಯ ಸರ್ಕಾರದ ಪರ ವಕೀಲರು ಸಮರ್ಪಕವಾಗಿ ವಾದ ಮಂಡಿಸದ ಕಾರಣ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ತಡೆಯಾಜ್ಞೆ ಬಂದಿದೆ. ಇದರ ಬೆನ್ನಲ್ಲೇ ಎಸ್‌ಟಿ ಸಮುದಾಯದ ಮೀಸಲಾತಿಯನ್ನು ರಾತ್ರೋರಾತ್ರಿ ಮತ್ತೆ ಶೇ.೩ಕ್ಕೆ ಇಳಿಸುವಂತಹ ಗೊಂದಲಕಾರಿ ಆದೇಶವನ್ನು ಸರ್ಕಾರ ಹೊರಡಿಸಿದೆ. ಇದರಿಂದಾಗಿ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದ ನೂರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ದೂಡಲ್ಪಟ್ಟಿದೆ. ಸರ್ಕಾರದ ಈ ಎಡವಟ್ಟಿನಿಂದ ಬೇಸತ್ತು ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವುಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿಗಾಗಿ ೬-೬-೫ ಮಾದರಿಯ ವರ್ಗೀಕರಣದ ಮಸೂದೆ ಅಂಗೀಕರಿಸಿ, ಡಿಸೆಂಬರ್ ೨೦೨೫ರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಯಿತು. ತದನಂತರ ರಾಜ್ಯಪಾಲರ ಬಳಿ ಹೋಗಿ ಶೇ.೧೭ರ ವರ್ಗೀಕರಣಕ್ಕೆ ಸಹಿ ಮಾಡಿಸಿಕೊಂಡು ಬಂದ ಸರ್ಕಾರ, ಅದೇ ದಿನ ಸಂಜೆ ಸಚಿವ ಸಂಪುಟ ಸಭೆ ಕರೆದು ಸುಪ್ರೀಂ ಕೋರ್ಟ್ ಮಿತಿಯಾದ ಶೇ.೫೦ರ ಒಳಗಡೆಯೇ ಮೀಸಲಾತಿ ನಿರ್ವಹಿಸುತ್ತೇವೆ ಎಂದು ಉಲ್ಟಾ ಹೊಡೆಯಿತು. ರಾಜಭವನಕ್ಕೆ ಒಂದು ಮಾಹಿತಿ ನೀಡಿ, ಕ್ಯಾಬಿನೆಟ್‌ನಲ್ಲಿ ಮತ್ತೊಂದು ತೀರ್ಮಾನ ಮಾಡುವ ಮೂಲಕ ಇಡೀ ಪ್ರಕ್ರಿಯೆಯನ್ನು ಕಗ್ಗಂಟಾಗಿಸಿದ್ದಾರೆ ಎಂದು ದೂರಿದರು.
ತಾಕತ್ತಿದ್ದರೆ ಸ್ಟೇ ತೆರವುಗೊಳಿಸಿ: ತಮಿಳುನಾಡಿನ ಮಾದರಿಯಲ್ಲಿ ಮೀಸಲಾತಿಯನ್ನು ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಹೇಳುತ್ತಾ ಕಾಂಗ್ರೆಸ್ ನಾಯಕರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಸ್ವಯಂ ಘೋಷಿತ ಚಾಂಪಿಯನ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದಾಯದ ಮೇಲೆ ನಿಜವಾದ ಕಳಕಳಿ ಇದ್ದರೆ, ತಕ್ಷಣವೇ ಹೈಕೋರ್ಟ್‌ನಲ್ಲಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.
೨೦೨೮ರಲ್ಲಿ ನಮ್ಮದೇ ಸರ್ಕಾರ: ಈ ಗಂಭೀರ ಸಮಸ್ಯೆಯ ಕುರಿತು ಚರ್ಚಿಸಲು ಮಾಜಿ ಸಚಿವರು, ಸಂಸದರು ಮತ್ತು ಶಾಸಕರನ್ನು ಒಳಗೊಂಡ ಬಿಜೆಪಿಯ ಉನ್ನತ ಮಟ್ಟದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಒಂದು ವೇಳೆ ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ, ನಾವು ರಕ್ತದಲ್ಲಿ ಬರೆದುಕೊಡುತ್ತೇವೆ ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಎಸ್‌ಸಿ, ಎಸ್ಟಿ ಸಮುದಾಯಗಳಿಗೆ ಸಿಗಬೇಕಾದ ಹಕ್ಕನ್ನು ಯಥಾವತ್ತಾಗಿ ಜಾರಿಗೊಳಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಸಿ.ಟಿ.ರವಿ, ಮಾಜಿ ಸಚಿವ, ಮಾಜಿ ಶಾಸಕರಾದ ಎನ್.ಮಹೇಶ್, ಹರ್ಷವರ್ಧನ್, ಎಲ್.ನಾಗೇಂದ್ರ, ಮಾಜಿ ಎಂಲ್‌ಸಿ ಸಿದ್ದರಾಜು, ಮಾಜಿ ಮೇಯರ್‌ಗಳಾದ ಸಂದೇಶ್‌ಸ್ವಾಮಿ, ಶಿವಕುಮಾರ್, ಮುಖಂಡರುಗಳಾದ ಎಸ್.ಮಹದೇವಯ್ಯ, ಶಿವರಾಮ್, ವಸಂತಕುಮಾರ್ ಸೇರಿ ಹಲವರು ಇದ್ದರು.



