ಮೈಸೂರು : ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಒಂದು ಸಣ್ಣ ರಿಪೇರಿಗೆ ನಿಲ್ಲಿಸಿದ್ದ ಲಾರಿಯನ್ನು ೯ ತಿಂಗಳಾದರೂ ರಿಪೇರಿ ಮಾಡಿ ನೀಡದ ಕಾರಣ ಲಾರಿ ಮಾಲೀಕನಿಗೆ ೨೭ ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ನಡೆದಿದ್ದು, ಅಶೋಕ್ ಲೈಲ್ಯಾಂಡ್ ಸರ್ವಿಸ್ ಸೆಂಟರ್‌ನವರು ಪರಿಹಾರ ನೀಡಬೇಕು ಎಂದು ಲಾರಿ ಮಾಲಿಕ ನಂದೀಶ್ ಒತ್ತಾಯಿಸಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಮಾಲೀಕ ನಂದೀಶ್ ಅವರು ಕಳೆದ ೯ ತಿಂಗಳ ಹಿಂದೆ ತಮ್ಮ ೧೨ ಚಕ್ರದ ಅಶೋಕ್ ಲೇಲ್ಯಾಂಡ್ ಟಿಪ್ಪರ್ ಲಾರಿಯನ್ನು ಸಣ್ಣ ರಿಪೇರಿಗಾಗಿ ಸರ್ವಿಸ್ ಸೆಂಟರ್‌ಗೆ ಬಿಟ್ಟಿದ್ದು, ಅಲ್ಲಿನ ಸರ್ವಿಸ್ ಸೆಂಟರ್‌ನವರು ವಿವಿಧ ಕಾರಣಗಳನ್ನು ನೀಡಿ ೯ ತಿಂಗಳಾದರೂ ತಮ್ಮ ಲಾರಿಯನ್ನು ರಿಪೇರಿ ಮಾಡಿ ಕೊಟ್ಟಿಲ್ಲ, ನಾನು ಹಲವು ಬಾರಿ ಸರ್ವಿಸ್ ಸೆಂಟರ್‌ಗೆ ಬಂದು ವಿಚಾರಣೆ ನಡೆಸಿ ಲಾರಿಯನ್ನು ಕೊಡುವಂತೆ ಕೇಳಿದರೂ ವಿವಿಧ ಸಬೂಬುಗಳನ್ನು ಕೊಟ್ಟು ಇವತ್ತು, ನಾಳೆ ಎಂದು ನನಗೆ ಸಾಗ ಹಾಕಿದರು. ಇತ್ತೀಚೆಗೆ ನಿಮ್ಮ ಲಾರಿ ರಿಪೇರಿ ಆಗಿದೆ ೩೪ ಸಾವಿರ ಬಿಲ್ ಕಟ್ಟಿ ಲಾರಿಯನ್ನು ತೆಗೆದುಕೊಂಡು ಹೋಗಿ ಎಂದು ಬಿಲ್ ಕಳಿಸಿದ್ದಾರೆ. ಆದರೇ ನಾನು ಇದೇ ಅಶೋಕ್ ಲೇಲ್ಯಾಂಡ್ ಶೋರೂಂನಿ0ದ ಲಾರಿಯನ್ನು ಸಾಲ ಮಾಡಿ ತೆಗೆದುಕೊಂಡಿದ್ದೇನೆ. ತಿಂಗಳಿಗೆ ೧.೧೦ ಲಕ್ಷ ರೂ ಇಎಂಐ ಕಟ್ಟುತ್ತಿದ್ದೇನೆ. ೯ ತಿಂಗಳ ಕಂತು ಪಾವತಿಸಿದೆ. ಲಾರಿಯ ಇನ್ಸುರೆನ್ಸ್, ಟ್ಯಾಕ್ಸ್ ಮುಂತಾದವೂ ಸಹ ಕಟ್ಟಿದ್ದೇನೆ. ನನ್ನ ಲಾರಿಯಿಂದ ದಿನಕ್ಕೆ ಕನಿಷ್ಠ ೧೦ ಸಾವಿರ ರೂ. ಆದಾಯ ಲೆಕ್ಕ ಹಾಕಿದರೂ ನನಗೆ ೯ ತಿಂಗಳು, ೫ ದಿನಕ್ಕೆ ಬರೋಬ್ಬರಿ ೨೭ ಲಕ್ಷ ರೂ. ಹಣ ಸಂಪಾದನೆ ಆಗುತ್ತಿತ್ತು, ಒಂದು ಸಣ್ಣ ರಿಪೇರಿಗಾಗಿ ನಾನು ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ಗೆ ಲಾರಿ ಬಿಟ್ಟರೆ, ೯ ತಿಂಗಳಾದರೂ ನನಗೆ ನನ್ನ ಲಾರಿ ರಿಪೇರಿ ಮಾಡಿ ಕೊಡದ ಕಾರಣ ನನಗಾಗಿರುವ ನಷ್ಟಕ್ಕೆ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್ ಅವರೇ ಜವಾಬ್ದಾರರು, ಈ ಬಗ್ಗೆ ನಾನು ಪೊಲೀಸರಿಗೂ ಮತ್ತು ಗ್ರಾಹಕರ ನ್ಯಾಯಾಲಯಕ್ಕೂ ದೂರು ನೀಡುತ್ತಿದ್ದೇನೆ. ನನಗೆ ಪರಿಹಾರ ಕೊಡುವ ತನಕ ನನ್ನ ಲಾರಿಯನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ನಂದೀಶ್ ದೂರಿದರು.
ಸರ್ವಿಸ್ ಸೆಂಟರ್ ಎದುರು ಪ್ರತಿಭಟನೆ ಎಚ್ಚರಿಕೆ
ಲಾರಿ ಮತ್ತು ಟಿಪ್ಪರ್ ಮಾಲೀಕರ ಕಷ್ಟ ಹೇಳತೀರದು, ಚಕ್ರ ಉರುಳಿದರೆ ಮಾತ್ರ ನಮಗೆ ಬದುಕು, ಇಲ್ಲವಾದರೆ ಇಲ್ಲ, ನಂದೀಶ್ ಅವರು ಸಾಲ ಮಾಡಿ ಟಿಪ್ಪರ್ ಖರೀದಿ ಮಾಡಿದ್ದಾರೆ. ಇದು ಶೋಂರೂ0 ವಾಹನ, ಗ್ಯಾರಂಟಿ ಇದೆ, ಅಂತಹದರಲ್ಲಿ ಇಂತಹ ಪ್ರತಿಷ್ಠಿತ ಅಶೋಕ್ ಲೇಲ್ಯಾಂಡ್ ಸರ್ವಿಸ್ ಸೆಂಟರ್‌ನವರೇ ಒಂದು ಸಣ್ಣ ರಿಪೇರಿಗೆ ೯ ತಿಂಗಳು ಮಾಡಿದರೆ ಹೇಗೆ, ಅವರು ಲಾರಿಯ ಸಂಪೂರ್ಣ ನಷ್ಟವನ್ನು ಭರಿಸಬೇಕು. ಇಲ್ಲವಾದಲ್ಲಿ ಸರ್ವಿಸ್ ಸೆಂಟರ್ ಎದುರು ಲಾರಿ ಮಾಲೀಕರ ಸಂಘದವತಿಯಿ0ದ ಪ್ರತಿಭಟನೆ ನಡೆಸುತ್ತೇವೆ.
• ರಾಜೇಂದ್ರ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷರು.



