Wednesday, May 27, 2026
Google search engine

Homeಕ್ರೀಡೆಕ್ವಾಲಿಫೈಯರ್-1ರಲ್ಲಿ ಗುಜರಾತ್ ವಿರುದ್ಧ ಗೆಲುವು : ಇತಿಹಾಸ ಬರೆದು ಫೈನಲ್‌ಗೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ಕ್ವಾಲಿಫೈಯರ್-1ರಲ್ಲಿ ಗುಜರಾತ್ ವಿರುದ್ಧ ಗೆಲುವು : ಇತಿಹಾಸ ಬರೆದು ಫೈನಲ್‌ಗೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!

ಧರ್ಮಶಾಲಾ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026ರ ಮೊದಲ ಫೈನಲಿಸ್ಟ್ ಆಗಿ ಹೊರಹೊಮ್ಮಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಬೆಂಗಳೂರು ಈ ಐತಿಹಾಸಿಕ ಸಾಧನೆ ಮಾಡಿದೆ. ತಂಡದ ಈ ಭರ್ಜರಿ ಗೆಲುವಿನ ರೂವಾರಿಯಾಗಿ ನಾಯಕ ರಜತ್ ಪಾಟೀದಾರ್ ಮಿಂಚಿದರು. ಅವರ ಬಿರುಗಾಳಿಯ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಕೃಣಾಲ್ ಪಾಂಡ್ಯ ತಲಾ 43 ರನ್‌ಗಳ ಮಹತ್ವದ ಕಾಣಿಕೆ ನೀಡಿದ್ದರು. ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು.

ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಬೆಂಗಳೂರು ಪರ ವೆಂಕಟೇಶ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ಅಯ್ಯರ್ 7 ಎಸೆತಗಳಲ್ಲಿ 19 ರನ್ ಗಳಿಸಿದರೆ, ಕೊಹ್ಲಿ 25 ಎಸೆತಗಳಲ್ಲಿ 43 ರನ್ ಬಾರಿಸಿದರು. ದೇವದತ್ ಪಡಿಕ್ಕಲ್ 30 ರನ್ ಗಳಿಸಿ ಔಟಾದರು. ಆದರೆ ಆ ಬಳಿಕ ಬಂದ ನಾಯಕ ರಜತ್ ಪಾಟೀದಾರ್ ಕೇವಲ 33 ಎಸೆತಗಳಲ್ಲಿ 281.82ರ ಸ್ಟ್ರೈಕ್ ರೇಟ್‌ನಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 93 ರನ್ ಚಚ್ಚಿದರು. ಇವರು ಕೃಣಾಲ್ ಪಾಂಡ್ಯ ಜೊತೆಗೂಡಿ 4ನೇ ವಿಕೆಟ್‌ಗೆ 95 ರನ್‌ಗಳ ಅಮೋಘ ಜೊತೆಯಾಟವಾಡಿದರು.

ಕೊನೆಯ 6 ಓವರ್‌ ಗಳಲ್ಲಿ 114 ರನ್ ಭರ್ಜರಿ ಲೂಟಿ!

14 ಓವರ್‌ಗಳ ಮುಕ್ತಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಕೋರ್ 140 ರನ್ ಆಗಿತ್ತು. ಇಲ್ಲಿಂದ ತಂಡ 210 ರನ್ ತಲುಪಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ರಜತ್ ಪಾಟೀದಾರ್ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಸ್ಕೋರ್ 254ಕ್ಕೆ ತಲುಪಿತು. ಬೆಂಗಳೂರು ತಂಡ ಕೊನೆಯ 6 ಓವರ್‌ಗಳಲ್ಲಿ ಬರೋಬ್ಬರಿ 114 ರನ್ ಕೊಳ್ಳೆ ಹೊಡೆಯಿತು.

ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ

ನಾಯಕನ ಆಟದ ನೆರವಿನಿಂದ ಆರ್‌ಸಿಬಿ ಕಲೆಹಾಕಿದ 254 ರನ್, ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ ಹಂತದಲ್ಲಿ ದಾಖಲಾದ ಅತ್ಯಂತ ಗರಿಷ್ಠ ಸ್ಕೋರ್ ಆಗಿದೆ. ಅಷ್ಟೇ ಅಲ್ಲದೆ, ರನ್‌ಗಳ ಆಧಾರದ ಮೇಲೆ ಪ್ಲೇಆಫ್‌ನಲ್ಲಿ ದಾಖಲಾದ ಅತಿ ದೊಡ್ಡ ಗೆಲುವು ಕೂಡ ಇದಾಗಿದೆ.

ತತ್ತರಿಸಿದ ಗುಜರಾತ್ ಬ್ಯಾಟಿಂಗ್ ಲೈನ್-ಅಪ್

ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಬ್ಯಾಟರ್‌ಗಳು ನಿರಾಶೆ ಮೂಡಿಸಿದರು. ಭರವಸೆ ಮೂಡಿಸಿದ್ದ ಸಾಯಿ ಸುದರ್ಶನ್, ಬ್ಯಾಟಿಂಗ್ ಮಾಡುವಾಗ ಕೈಯಿಂದ ಬ್ಯಾಟ್ ಜಾರಿ ವಿಕೆಟ್‌ಗೆ ಬಡಿದು ವಿಚಿತ್ರವಾಗಿ ಔಟಾದರು. ನಾಯಕ ಶುಭಮನ್ ಗಿಲ್ (2) ಅವರನ್ನು ಭುವನೇಶ್ವರ್ ಕುಮಾರ್ ಬೌಲ್ಡ್ ಮಾಡಿದರು. ಜೋಸ್ ಬಟ್ಲರ್ ಬಿರುಸಿನ ಬ್ಯಾಟಿಂಗ್ ನಡೆಸಿ 11 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 29 ರನ್ ಗಳಿಸಿದರಾದರೂ, ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ನಿಶಾಂತ್ ಸಿಂಧು (5), ವಾಷಿಂಗ್ಟನ್ ಸುಂದರ್ (8), ಮತ್ತು ಜೇಸನ್ ಹೋಲ್ಡರ್ (0) ರನ್ ಗಳಿಸದೇ ನಿರಾಸೆ ಮೂಡಿಸಿದರು.

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ರಾಹುಲ್ ತೇವಾಟಿಯಾ 43 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 68 ರನ್ ಗಳಿಸಿ ಹೋರಾಟ ನಡೆಸಿದರಾದರೂ, ಅದು ಗೆಲುವಿಗೆ ಸಾಕಾಗಲಿಲ್ಲ. ಅಂತಿಮವಾಗಿ ಗುಜರಾತ್ ಟೈಟನ್ಸ್ 19.3 ಓವರ್‌ಗಳಲ್ಲಿ 162 ರನ್‌ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಆರ್‌ ಸಿಬಿ 92 ರನ್‌ ಗಳ ಐತಿಹಾಸಿಕ ಗೆಲುವು ಸಾಧಿಸಿ ಬೀಗಿದೆ.

RELATED ARTICLES
- Advertisment -
Google search engine

Most Popular