ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರು 2013ರಲ್ಲಿ ಭಾರತ ಸರ್ಕಾರ ಘೋಷಿಸಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿ ರಾಷ್ಟ್ರದ ಗಮನ ಸೆಳೆದಿದ್ದರು.
ಪ್ರಶಸ್ತಿ ಘೋಷಣೆಯಾದ ಬಳಿಕ ಪ್ರತಿಕ್ರಿಯಿಸಿದ್ದ ಅವರು, ನನಗೆ 75 ವರ್ಷ ವಯಸ್ಸಾಗುವವರೆಗೂ ಕೇಂದ್ರ ಸರ್ಕಾರ ನನ್ನ ಸೇವೆಯನ್ನು ಗುರುತಿಸಿರಲಿಲ್ಲ. ಈಗ ಪ್ರಶಸ್ತಿ ನೀಡುತ್ತಿರುವುದು ತುಂಬ ತಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇನ್ನೂ ನಾನು ಕಳೆದ 55 ವರ್ಷಗಳಿಂದ ಹಾಡುತ್ತಿದ್ದೇನೆ. ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದೇನೆ. ನನ್ನ ಹಾಡುಗಳನ್ನು ಜನರು ಪ್ರೀತಿಸಿದ್ದಾರೆ. ಜನರ ಅಭಿಮಾನ ಮತ್ತು ಮನ್ನಣೆಯೇ ನನಗೆ ಅತ್ಯಂತ ದೊಡ್ಡ ಪ್ರಶಸ್ತಿ ಎಂದು ಅವರು ಹೇಳಿದ್ದರು.
ಇದೇ ವೇಳೆ ಸರ್ಕಾರದ ವಿರುದ್ಧ ನನಗೆ ಯಾವುದೇ ವೈಯಕ್ತಿಕ ಅಸಮಾಧಾನವಿಲ್ಲ. ಆದರೆ ದಕ್ಷಿಣ ಭಾರತದ ಕಲಾವಿದರಿಗೆ ಕೇಂದ್ರ ಸರ್ಕಾರ ಸೂಕ್ತ ಗೌರವ ನೀಡುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರ ಜೊತೆಗೆ, 1980ರ ದಶಕದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಹಿನ್ನೆಲೆ ಗಾಯಕಿಯರ ವಿಭಾಗವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ, ಗಾಯಕಿಯರಿಗೂ ಪ್ರತ್ಯೇಕ ಪ್ರಶಸ್ತಿ ನೀಡುವವರೆಗೆ ಕನ್ನಡದಲ್ಲಿ ಹಾಡುವುದಿಲ್ಲ ಎಂದು ಎಸ್.ಜಾನಕಿ ನಿಲುವು ತಳೆದಿದ್ದರು. ಅವರ ಈ ದೃಢ ನಿಲುವಿನ ಬಳಿಕ ಸರ್ಕಾರ ಕ್ರಮ ಕೈಗೊಂಡು, 1988-89ರಿಂದ ಹಿನ್ನೆಲೆ ಗಾಯಕ-ಗಾಯಕಿಯರಿಗೂ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಆರಂಭವಾಯಿತು.
ಎಸ್.ಜಾನಕಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ತಮಿಳು, ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ರಾಜ್ಯ ಸರ್ಕಾರಗಳಿಂದ ಅನೇಕ ಪ್ರತಿಷ್ಠಿತ ಪ್ರಶಸ್ತಿ ಮತ್ತು ಗೌರವಗಳಿಗೆ ಭಾಜನರಾಗಿದ್ದರು.



