Wednesday, May 27, 2026
Google search engine

Homeಸ್ಥಳೀಯಮೈಸೂರು: ಮೇ29ರಿಂದ ಸಾವಯವ ಮಾವು, ಹಲಸು ಹಬ್ಬ

ಮೈಸೂರು: ಮೇ29ರಿಂದ ಸಾವಯವ ಮಾವು, ಹಲಸು ಹಬ್ಬ

ಮೈಸೂರು: ತೋಟಗಾರಿಕೆ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಗುಚ್ಚಗಳ ಕೃಷಿಕರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಗುರಿ ಹೊಂದಲಾಗಿದ್ದು, ಇಲಾಖೆ ಜೊತೆಗೂಡಿ ಮೇ 29ರಂದು ಸಾವಯವ ಮಾವು, ಹಲಸು ಹಣ್ಣುಗಳ ಹಬ್ಬವನ್ನು ನಗರದ ನೆಕ್ಸಸ್ ಸೆಂಟರ್ ಸಿಟಿಮಾಲ್ ನಲ್ಲಿ ನಡೆಸಲಾಗುತ್ತಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ ತಿಳಿಸಿದರು.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಮೇ23, 25ರಂದು ಲಾಲ್‌ಬಾಗ್ ಬೆಂಗಳೂರಿನಲ್ಲಿ 3 ದಿನಗಳ ಕಾಲ ಸಾವಯವ ಮಾವು ಮತ್ತು ಹಲಸು ಮೇಳವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಮಾವು ಮತ್ತು ಹಲಸು ಹಣ್ಣುಗಳ ಜೊತೆ ಇತರೆ ಸಾವಯವ ಪದಾರ್ಥಗಳನ್ನು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಈ ವೇದಿಕೆ ಮೂಲಕ ಕೃಷಿಕರು ಬೆಳೆದಿರುವ ಸಾವಯವ ಮಾವು ಮತ್ತು ಹಲಸಿನ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗುವುದು. ಮಾವು ಮತ್ತು ಹಲಸು ಆಧಾರಿತ ವಿಶೇಷ ಆಹಾರಗಳ ತಯಾರಿಸುವ ವಿಧಾನಗಳನ್ನು ತೋರಿಸಿ ಅವುಗಳನ್ನು ಸಾರ್ವಜನಿಕರು ರುಚಿ ನೋಡುವ ಮತ್ತು ಖರೀದಿಸುವ ಅವಕಾಶ ಮಾಡಲಾಗುವುದು ಎಂದರು.

ರಾಜ್ಯದ ವಿವಿಧ ಭಾಗದ ಆಹಾರ, ತಿಂಡಿ ತಿನಿಸುಗಳ ಪರಿಚಯ ಮತ್ತು ಮಾರಾಟ ಕೃಷಿಕರ ಕುಟುಂಬಗಳ ಮೂಲಕ ಈ ಕಾರ್ಯಕ್ರಮ ಏರ್ಪಡಿಸಲಾಗುವುದು. ಸಾವಯವ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಉಡುಪುಗಳು ಮತ್ತು ಕಲಾಕೃತಿಗಳು ಇವುಗಳನ್ನು ತಯಾರಿಸಲು ಕಚ್ಚಾ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ತಯಾರಿಸುವ ವಿಧಾನಗಳನ್ನು ಪ್ರದರ್ಶಿಸಿ ಅವುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು. ನಗರ ತೋಟಗಾರಿಕೆ ಹಾಗೂ ನೈಸರ್ಗಿಕ ಸಾಬೂನು ತಯಾರಿಕಾ ಕಾರ್ಯಾಗಾರಗಳು ನೈಸರ್ಗಿಕವಾಗಿ ನಾಟಿ ತಳಿಗಳನ್ನು ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ಬೆಳೆಯುವ ವಿಧಾನ ಮತ್ತು ನೈಸರ್ಗಿಕ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ಸೋವು, ಡಿಟರ್ಜೆಂಟ್‌ಗಳನ್ನು ತಯಾರಿಸುವ ವಿಧಾನದ ಬಗ್ಗೆ ಪ್ರಾಯೋಗಿಕ ಪ್ರದರ್ಶನ ಮತ್ತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದರು.

ಜೈವಿಕ ಸೊಸೈಟಿ ಅಧ್ಯಕ್ಷ ಡಾ.ರಾಮಕೃಷ್ಣ ಮಾತನಾಡಿ 80ಕ್ಕೂ ಹೆಚ್ಚು ಸ್ಥಳೀಯ ಹಾಗೂ ವಿದೇಶಿ ಮಾವಿನ ತಳಿಗಳು ಮತ್ತು 35ಕ್ಕೂ ಹೆಚ್ಚು ಹಲಸಿನ ತಳಿಗಳನ್ನು ಈ ಪ್ರದರ್ಶನದಲ್ಲಿ ಇಡಲಾಗುವುದು. ರಾಜ್ಯದಲ್ಲಿರುವ ಮಾವು ಮತ್ತು ಹಲಸಿನ ತಳಿಗಳ ವೈವಿಧ್ಯತೆ, ಅವುಗಳನ್ನು ಗುರುತಿಸುವ ವಿಧಾನ, ಇಂತಹ ಸಸ್ಯ ವೈವಿಧ್ಯತೆಯನ್ನು ಸಂರಕ್ಷಣೆ ಮಾಡಲಾಗುತ್ತಿರುವ ಕೃಷಿಕರ ವಿವರ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಅದರಲ್ಲೂ ಯುವ ಪೀಳಿಗೆಗೆ ತಿಳಿಯಪಡಿಸಲಾಗುತ್ತದೆ. ಪ್ರತಿ ಮಾವಿನ ವಿಶೇಷತೆ, ಯಾವ ಹವಾಮಾನದಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತದೆ ಎಂಬುದನ್ನು ತಿಳಿಸಲಾಗುತ್ತದೆ. ಉದಾ. ಟಿಪ್ಪು ಬಡಾ ಬಾಗ್ ಮಾವಿನ ತಳಿಗಳು, ಆಲೂರಿನ ಹಲಸು ವೈವಿಧ್ಯತೆ ಇತ್ಯಾದಿ.ನೈಸರ್ಗಿಕವಾಗಿ ಬೆಳೆದು ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳನ್ನು ಬಗ್ಗೆ ತಿಳಿಸಲಾಗುವುದು ಎಂದರು.

ನಮ್ಮ ರೈತರ ಮಾರುಕಟ್ಟೆ ಸದಸ್ಯ ಕವಿತಾ ಶ್ರೀನಿವಾಸನ್ ಮಾತನಾಡಿ, ನೈಸರ್ಗಿಕ ಕೃಷಿ, ಪರಿಸರ ಸಂರಕ್ಷಣೆ, ಕೃಷಿಯಲ್ಲಿ ಪಶು ಸಂಗೋಪನೆ ಇತ್ಯಾದಿಗಳ ಬಗ್ಗೆ ಮಕ್ಕಳು ಚಿತ್ರ ಬಿಡಿಸಬಹುದಾಗಿದೆ ಎಂದು ತಿಳಿಸಿದರು. ಪ್ರದರ್ಶನಕ್ಕೆ ಆಗಮಿಸುವ ಯುವಕರಿಗೆ ಹಲಸು ಹಣ್ಣುಗಳ ತೂಕ ಹಾಗೂ ಆಕಾರಗಳನ್ನು ಮನೋರಂಜನೆ ಮೂಲಕ ಅರಿವು ಮೂಡಿಸುವುದು ಎಂದರು.

ಕಾರ್ಯಕ್ರಮದಲ್ಲಿ ಜೈವಿಕ ಸೊಸೈಟಿ ಸದಸ್ಯೆ ಸಹನಿ, ಜೈವಿಕ ಸೊಸೈಟಿ ಸದಸ್ಯ ಎ.ಎಮ್.ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular