Monday, June 1, 2026
Google search engine

Homeದೇಶಹಾರ್ಮುಜ್ ಬಿಕ್ಕಟ್ಟಿನ ನಡುವೆ ಭಾರತ ಸರ್ಕಾರದ ಮಹತ್ವದ ನಿರ್ಧಾರ; ಪೆಟ್ರೋಲ್-ಡೀಸೆಲ್ ಮೇಲಿನ ರಫ್ತು ಸುಂಕ ಕಡಿತ,...

ಹಾರ್ಮುಜ್ ಬಿಕ್ಕಟ್ಟಿನ ನಡುವೆ ಭಾರತ ಸರ್ಕಾರದ ಮಹತ್ವದ ನಿರ್ಧಾರ; ಪೆಟ್ರೋಲ್-ಡೀಸೆಲ್ ಮೇಲಿನ ರಫ್ತು ಸುಂಕ ಕಡಿತ, ಇನ್ಮುಂದೆ ಎಷ್ಟಿರಲಿದೆ ತೆರಿಗೆ ?

ನವದೆಹಲಿ : ವಿಶ್ವಾದ್ಯಂತ ತೈಲ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ ಭಾರತ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಫ್ತು ಸುಂಕವನ್ನು (ಎಕ್ಸ್‌ಪೋರ್ಟ್ ಡ್ಯೂಟಿ) ಕಡಿತಗೊಳಿಸಿದೆ.

ಜೂನ್ 1 ರಿಂದ ಜಾರಿಗೆ ಬರುವಂತೆ ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್ – ವಿಮಾನದ ಇಂಧನ) ಮೇಲಿನ ರಫ್ತು ಸುಂಕವನ್ನು ಕಡಿತಗೊಳಿಸಲಾಗುವುದು ಎಂದು ಕೇಂದ್ರದ ಮೋದಿ ಸರ್ಕಾರವು ತಿಳಿಸಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 1.5 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇನ್ನು ಡೀಸೆಲ್ ಮೇಲಿನ ಸುಂಕ ಪ್ರತಿ ಲೀಟರ್‌ಗೆ 13.5 ರೂಪಾಯಿ ಹಾಗೂ ಎಟಿಎಫ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 9.5 ರೂಪಾಯಿ ಆಗಿ ಉಳಿಸಿಕೊಳ್ಳಲಾಗಿದೆ.

ಪ್ರತಿ 15 ದಿನಗಳಿಗೊಮ್ಮೆ ಪರಿಶೀಲನೆ

ತೈಲ ದರಗಳನ್ನು ಪ್ರತಿ ಎರಡು ವಾರಕ್ಕೊಮ್ಮೆ ಬದಲಾಯಿಸಲಾಗುತ್ತಿದೆ. ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ ಗಳ ಜಾಗತಿಕ ಸರಾಸರಿ ಬೆಲೆಗಳ ಆಧಾರದ ಮೇಲೆ ಈ ಬದಲಾವಣೆಗಳನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ, ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆಗಳನ್ನು ಪರಿಶೀಲಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ಮೇಲಿನ ರಫ್ತು ಸುಂಕವನ್ನು ನಿಗದಿಪಡಿಸುತ್ತದೆ.

ಆದರೆ, ಸಾಮಾನ್ಯ ಜನರಿಗೆ ಸಿಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹಳೆಯ ತೆರಿಗೆಯೇ ಮುಂದುವರಿಯಲಿದ್ದು, ಅದರಲ್ಲಿ ಯಾವುದೇ ಹೊಸ ತೆರಿಗೆಯನ್ನು ಸೇರಿಸಲಾಗಿಲ್ಲ ಅಥವಾ ಕಡಿತಗೊಳಿಸಲಾಗಿಲ್ಲ. ರಫ್ತು ಸುಂಕ ಎಂಬುದು ಒಂದು ರೀತಿಯ ಪರೋಕ್ಷ ತೆರಿಗೆಯಾಗಿದ್ದು (ಇನ್‌ಡೈರೆಕ್ಟ್ ಟ್ಯಾಕ್ಸ್), ಯಾವುದೇ ದೇಶದ ಸರ್ಕಾರವು ತನ್ನ ದೇಶದಿಂದ ಹೊರಗೆ (ಇತರ ದೇಶಗಳಿಗೆ) ಕಳುಹಿಸುವ ಸರಕುಗಳ ಮೇಲೆ ಇದನ್ನು ವಿಧಿಸುತ್ತದೆ.

ಕಳೆದ ಬಾರಿ ತಿದ್ದುಪಡಿ ಯಾವಾಗ ಆಗಿತ್ತು?

ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತಿನ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಉಪಕರ (RIC) ರೂಪದಲ್ಲಿ ರಫ್ತು ಸುಂಕವನ್ನು ಮೊದಲ ಬಾರಿಗೆ ಮಾರ್ಚ್ 27, 2026 ರಂದು ಜಾರಿಗೆ ತರಲಾಗಿತ್ತು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ಪ್ರಭಾವಿತವಾಗಿರುವ ಇಂತಹ ಸಮಯದಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಅತಿಯಾದ ರಫ್ತನ್ನು ತಡೆದು ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಸ್ತುತ ಪರಿಸ್ಥಿತಿಗಳ ಆಧಾರದ ಮೇಲೆ ಪ್ರತಿ ಎರಡುವಾರಕ್ಕೊಮ್ಮೆ ಸುಂಕವನ್ನು ಪರಿಶೀಲಿಸಲಾಗುತ್ತದೆ ಮತ್ತು ತಿದ್ದುಪಡಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹಿಂದಿನ ತಿದ್ದುಪಡಿಯು ಮೇ 16, 2026 ರಿಂದ ಜಾರಿಗೆ ಬಂದಿತ್ತು.

ಜೂನ್ 1 ರಿಂದ ಹೊಸ ದರಗಳು ಅನ್ವಯ

ಪೆಟ್ರೋಲ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ 1.5 ರೂಪಾಯಿ ಸುಂಕ ವಿಧಿಸಲಾಗುವುದು. ಈ ಸಂಪೂರ್ಣ ಮೊತ್ತವನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ರೂಪದಲ್ಲಿ ವಸೂಲಿ ಮಾಡಲಾಗುವುದು ಮತ್ತು ರಸ್ತೆ ಹಾಗೂ ಮೂಲಸೌಕರ್ಯ ಉಪಕರವನ್ನು ವಿಧಿಸಲಾಗುವುದಿಲ್ಲ. ವಿಮಾನಯಾನ ಟರ್ಬೈನ್ ಇಂಧನಕ್ಕಾಗಿ (ಎಟಿಎಫ್) ಮೋದಿ ಸರ್ಕಾರವು ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 9.5 ರೂಪಾಯಿ ಎಂದು ನಿಗದಿಪಡಿಸಿದೆ. ಈ ಸುಂಕವನ್ನು ಕೇವಲ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ರೂಪದಲ್ಲಿ ಮಾತ್ರ ವಸೂಲಿ ಮಾಡಲಾಗುತ್ತದೆ. ಮುಂದಿನ ಪರಿಶೀಲನೆಯ ಸಂದರ್ಭದಲ್ಲಿ ಹೊಸ ಬದಲಾವಣೆಗಳನ್ನು ಘೋಷಿಸುವವರೆಗೆ ಈ ಪರಿಷ್ಕೃತ ದರಗಳು ಮುಂದಿನ ಎರಡು ವಾರಗಳವರೆಗೆ ಜಾರಿಯಲ್ಲಿರುತ್ತವೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular