ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ 7 ಸದಸ್ಯ ಸ್ಥಾನಕ್ಕೆ ನಡೆಯುವ ವಿಧಾನಪರಿಷತ್ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟಿಸಲಾಗಿದೆ.
ವಿಧಾನಪರಿಷತ್ ನ ದ್ವೈವಾರ್ಷಿಕ ಚುನಾವಣೆಯ ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ ಅವರು ಅಧಿಸೂಚನೆ ಪ್ರಕಟಿಸಿದ್ದು ಇಂದಿನಿಂದ ಜೂನ್ 8ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ಜೂನ್ 9 ರಂದು ನಾಮಪತ್ರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಸಿಂಧುವಾದ ನಾಮಪತ್ರಗಳ ಪ್ರಕಟಣೆ ಹೊರಡಿಸಲಾಗುತ್ತದೆ. ಜೂನ್ 11 ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 18ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.
ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್ ಕೆ., ನಾಸಿರ್ ಅಹಮದ್, ತಿಪ್ಪಣ್ಣಪ್ಪ, ಸುನೀಲ್ ವಲ್ಯಾಪುರೆ, ಬಿ.ಕೆ.ಹರಿಪ್ರಸಾದ್ ಅವರು ಜೂನ್ 30 ರಂದು ನಿವೃತ್ತಿ ಹೊಂದಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.



