ನವದೆಹಲಿ: ಜಾಗತಿಕ ಹವಾಮಾನದಲ್ಲಿ ಭಾರೀ ಏರುಪೇರಾಗುತ್ತಿದ್ದು, ‘ಎಲ್ ನಿನೋ’ ಪ್ರಭಾವದಿಂದಾಗಿ ವಿಶ್ವದಾದ್ಯಂತ ತಲ್ಲಣ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ನೇರ ಪರಿಣಾಮ ಭಾರತದ ಮೇಲೂ ಬೀರಲಿದ್ದು, ಭೀಕರ ಹವಾಮಾನ ಬದಲಾವಣೆಗೆ ದೇಶ ಸಾಕ್ಷಿಯಾಗಲಿದೆ ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ (NOAA) ಸಂಸ್ಥೆಯ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಅಟ್ಲಾಂಟಿಕ್ ಚಂಡಮಾರುತಗಳು ಶಾಂತ, ಪ್ರಶಾಂತ್ ಮಹಾಸಾಗರದಲ್ಲಿ ಅಬ್ಬರ!
ಸಾಮಾನ್ಯವಾಗಿ ಜೂನ್ ಆರಂಭದಿಂದ ನವೆಂಬರ್ 30 ರವರೆಗೆ ಅಟ್ಲಾಂಟಿಕ್ ಚಂಡಮಾರುತದ ಅವಧಿಯಾಗಿರುತ್ತದೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಇದು ತುತ್ತತುದಿಗೆ ತಲುಪುತ್ತದೆ. ಆದರೆ, ಈ ಬಾರಿ ‘ಅಲ್ ನಿನೋ’ ಪ್ರಭಾವದಿಂದಾಗಿ ಅಟ್ಲಾಂಟಿಕ್ ಸಾಗರದಲ್ಲಿ ಚಂಡಮಾರುತಗಳ ಅಬ್ಬರ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಚಂಡಮಾರುತದ ಚಟುವಟಿಕೆಗಳು ಸಾಮಾನ್ಯಕ್ಕಿಂತ ಕಡಿಮೆ ಇರಲು 55% ಸಾಧ್ಯತೆಯಿದ್ದರೆ, ಹೆಚ್ಚಾಗಲು ಕೇವಲ 10% ಮಾತ್ರ ಅವಕಾಶವಿದೆ. ಆದರೆ, ಇದೇ ವೇಳೆ ಪ್ರಶಾಂತ್ ಮಹಾಸಾಗರದಲ್ಲಿ ಚಂಡಮಾರುತಗಳ ತೀವ್ರತೆ ಹೆಚ್ಚಾಗಲಿದೆ.
ಏನಿದು ‘ಎಲ್ ನಿನೋ’ ಪ್ರಭಾವ?
ಮಧ್ಯ ಮತ್ತು ಪೂರ್ವ ಪ್ರಶಾಂತ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ನಿಯತಕಾಲಿಕವಾಗಿ ಹೆಚ್ಚಾಗುವುದನ್ನು (ಬಿಸಿಯಾಗುವುದನ್ನು) ‘ಎಲ್ ನಿನೋ’ ಎನ್ನಲಾಗುತ್ತದೆ.
ಎಲ್ ನಿನೋ ಅವಧಿಯಲ್ಲಿ ಗಾಳಿಯ ವೇಗ ಕಡಿಮೆಯಾಗುತ್ತದೆ ಅಥವಾ ದಿಕ್ಕು ಬದಲಾಗುತ್ತದೆ. ಇದರಿಂದಾಗಿ ಪ್ರಶಾಂತ್ ಮಹಾಸಾಗರದ ಬಿಸಿ ನೀರು ಮರಳಿ ಪೂರ್ವದ ಕಡೆಗೆ ಅಂದರೆ ಅಮೆರಿಕದ ಕರಾವಳಿಯತ್ತ ಹರಿಯಲಾರಂಭಿಸುತ್ತದೆ.
ಇದು ಜಾಗತಿಕ ಮಳೆ ವ್ಯವಸ್ಥೆಯನ್ನು ಏರುಪೇರು ಮಾಡುತ್ತದೆ. ಇದರ ಸಂಪೂರ್ಣ ವಿರುದ್ಧ ಪ್ರಕ್ರಿಯೆಯನ್ನು ‘ಲಾ ನಿನಾ’ ಎನ್ನಲಾಗುತ್ತದೆ, ಇದರಲ್ಲಿ ಸಮುದ್ರದ ನೀರು ಸಾಮಾನ್ಯಕ್ಕಿಂತ ತಣ್ಣಗಿರುತ್ತದೆ.
ಎಲ್ ನಿನೋ ಪ್ರಕ್ರಿಯೆಯು ಸಾಮಾನ್ಯವಾಗಿ ಪ್ರತಿ 2 ರಿಂದ 7 ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು ಇದು 9 ರಿಂದ 12 ತಿಂಗಳುಗಳ ಕಾಲ ಇರುತ್ತದೆ. ಇದು ಸಕ್ರಿಯವಾಗಿರುವಾಗ ಜಾಗತಿಕ ಸರಾಸರಿ ತಾಪಮಾನ ಗಣನೀಯವಾಗಿ ಹೆಚ್ಚಾಗುತ್ತದೆ.
ಜಗತ್ತಿನಾದ್ಯಂತ ಇದರ ಪರಿಣಾಮವೇನು?
ಎಲ್ ನಿನೋ ಪ್ರಶಾಂತ್ ಮಹಾಸಾಗರದಲ್ಲಿ ಆರಂಭವಾದರೂ, ಇದರ ಆಘಾತ ಇಡೀ ಜಗತ್ತಿಗೆ ತಟ್ಟಲಿದೆ.
ಭಾರತ, ಆಸ್ಟ್ರೇಲಿಯಾ, ದಕ್ಷಿಣ ಮತ್ತು ಮಧ್ಯ ಆಫ್ರಿಕಾ ಹಾಗೂ ಅಮೆಜಾನ್ ಪ್ರದೇಶಗಳಲ್ಲಿ ತೀವ್ರವಾದ ಬಿಸಿಲು ಮತ್ತು ಕಾಡ್ಗಿಚ್ಚು ಕಾಣಿಸಿಕೊಳ್ಳಲಿದೆ.
ಅಮೆರಿಕದ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಉತ್ತರ ಅಮೆರಿಕದಲ್ಲೂ ಅತಿಯಾದ ಉಷ್ಣಾಂಶ ದಾಖಲಾಗಲಿದೆ.
ಭಾರತದ ಮೇಲಾಗುವ ‘ಭಯಾನಕ’ ಪರಿಣಾಮಗಳೇನು?
“ಭಾರತದ ಮೇಲೆ ಅಲ್ ನಿನೋ ನೇರ ಮತ್ತು ತೀವ್ರ ಪರಿಣಾಮ ಬೀರಲಿದೆ. ಈಗಾಗಲೇ ಹವಾಮಾನ ಬದಲಾವಣೆಯಿಂದಾಗಿ ದೇಶದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಅಲ್ ನಿನೋ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ.”
ದೇಶದಲ್ಲಿ ಈ ಬಾರಿ ಬೇಸಿಗೆಯ ಅವಧಿ ದೀರ್ಘಕಾಲ ಮುಂದುವರಿಯುವ ಸಾಧ್ಯತೆಯಿದೆ.
ಮಾನ್ಸೂನ್ (ಮಳೆಗಾಲ) ಅವಧಿಯಲ್ಲಿ ಸಾಮಾನ್ಯಕ್ಕಿಂತ ಅತ್ಯಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ.
ಮಳೆ ಕೊರತೆಯಿಂದಾಗಿ ಕೃಷಿ ಇಳುವರಿ ಕುಂಠಿತಗೊಳ್ಳಲಿದ್ದು, ದೇಶದಲ್ಲಿ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ (ಹಣದುಬ್ಬರ) ಆತಂಕ ಎದುರಾಗಿದೆ. (ಏಜೆನ್ಸಿಸ್)



