Tuesday, June 2, 2026
Google search engine

Homeಅಪರಾಧಕಾನೂನು"ಇನ್ನು ಮುಂದೆ ದ್ವೇಷ ಭಾಷಣ ಮಾಡಲ್ಲ": ಹೈಕೋರ್ಟ್‌ಗೆ ಭರವಸೆ

“ಇನ್ನು ಮುಂದೆ ದ್ವೇಷ ಭಾಷಣ ಮಾಡಲ್ಲ”: ಹೈಕೋರ್ಟ್‌ಗೆ ಭರವಸೆ

ಬೆಂಗಳೂರು: ದ್ವೇಷ ಭಾಷಣ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು, ಇನ್ನು ಮುಂದೆ ಭಟ್ ಯಾವುದೇ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.

ಉಪ್ಪಳಿಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಯೆಂಬ ಆರೋಪದ ಹಿನ್ನೆಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ನೀಡಿದ ದೂರಿನ ಆಧಾರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಭಟ್ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ಈ ಹಿಂದೆ ತಡೆಯಾಜ್ಞೆ ನೀಡಿತ್ತು.

ಸೋಮವಾರ ಅರ್ಜಿ ವಿಚಾರಣೆಗೆ ಬಂದ ವೇಳೆ ದೂರುದಾರರ ಪರ ಹಿರಿಯ ವಕೀಲ ಎಸ್. ಬಾಲನ್ ಅವರು ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು. ಪ್ರಭಾಕರ ಭಟ್ ನಿರಂತರವಾಗಿ ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದು, ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ವಾದಿಸಿದರು. ಭಟ್ ವಿರುದ್ಧ ಈಗಾಗಲೇ 12 ಎಫ್‌ಐಆರ್‌ಗಳು ದಾಖಲಾಗಿರುವ ಪಟ್ಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಯಾಗಿ ಭಟ್ ಪರ ವಕೀಲ ಅರುಣ್ ಶ್ಯಾಮ್, ಭಟ್ ಅವರಿಗೆ 83 ವರ್ಷ ವಯಸ್ಸಾಗಿದ್ದು, ತಡೆಯಾಜ್ಞೆ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ, ಮುಂದಿನ ದಿನಗಳಲ್ಲಿ ಯಾವುದೇ ದ್ವೇಷ ಭಾಷಣ ನಡೆಯುವುದಿಲ್ಲ ಎಂಬ ಭರವಸೆಯನ್ನು ನ್ಯಾಯಪೀಠಕ್ಕೆ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಪರಿಗಣಿಸಲು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ನಿಗದಿಪಡಿಸಲಾಗಿದೆ.

RELATED ARTICLES
- Advertisment -
Google search engine

Most Popular