ಮುಂಬೈ : ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಾಯಿಯ ಮನೆಯಲ್ಲಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ದುಬಾರಿ ಕೈಗಡಿಯಾರಗಳು (ವಾಚ್) ಕಳುವಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಹು ಪೊಲೀಸರು 47 ವರ್ಷದ ರಾಶಿ ಛಾಬ್ರಿಯಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆ ನಟಿಯ ತಾಯಿಯ ನಂಬಿಕೆ ಗಳಿಸಿ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ.
ಲಾಕರ್ ಮುರಿದು ಕಳ್ಳತನ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಮಹಿಳೆ 2020 ರಿಂದ ಟಂಡನ್ ಕುಟುಂಬದ ಸಂಪರ್ಕದಲ್ಲಿದ್ದಳು. ರವೀನಾ ಟಂಡನ್ ಅವರ 86 ವರ್ಷದ ವಯೋವೃದ್ಧ ತಾಯಿಯನ್ನು ನೋಡಿಕೊಳ್ಳಲು ಆಕೆ ಆಗಾಗ ಮನೆಗೆ ಬರುತ್ತಿದ್ದಳು. ಮನೆಯಲ್ಲಿ ಅಡುಗೆ ಮಾಡುವುದು ಮತ್ತು ವೃದ್ಧೆಯ ಆರೈಕೆ ಮಾಡುವ ಮೂಲಕ ಕುಟುಂಬದವರ ಅಪಾರ ನಂಬಿಕೆಯನ್ನು ಗಳಿಸಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ, ಮನೆಯ ಲಾಕರ್ ಮುರಿದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಎರಡು ದುಬಾರಿ ವಾಚ್ಗಳನ್ನು ಕದ್ದಿದ್ದಾಳೆ.
ಕಳ್ಳತನ ಬೆಳಕಿಗೆ ಬಂದಿದ್ದು ಹೇಗೆ?
ಮನೆಯಲ್ಲಿದ್ದ ಒಡವೆ ಮತ್ತು ವಾಚ್ಗಳು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬದವರು ಹೌಸ್ ಹೆಲ್ಪರ್ ರಾಶಿ ಛಾಬ್ರಿಯಾಳನ್ನು ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೇನೂ ತಿಳಿಯದೆಂದು ನಿರಾಕರಿಸಿದ ಆಕೆ, ತೀವ್ರ ವಿಚಾರಣೆಯ ನಂತರ ದುಬಾರಿ ವಾಚ್ಗಳನ್ನು ಮರಳಿ ನೀಡಿದ್ದಾಳೆ. ಅಲ್ಲದೆ, ಒಡವೆಗಳನ್ನು ಜಗದೀಶ್ ಎಂಬ ವ್ಯಕ್ತಿಗೆ ನೀಡಿರುವುದಾಗಿ, ಶೀಘ್ರದಲ್ಲೇ ಅದನ್ನು ವಾಪಸ್ ಕೊಡುವುದಾಗಿ ಹೇಳಿದ್ದಾಳೆ.
ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಆರೋಪಿ
‘ಮಾಧ್ಯಮ’ ವರದಿಯ ಪ್ರಕಾರ, ಒಡವೆಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದರೆ, ರಾಜೀವ್ ಎಂಬುವವರನ್ನು ಸುಳ್ಳು ಮಾದಕ ದ್ರವ್ಯ (ಡ್ರಗ್ಸ್) ಪ್ರಕರಣದಲ್ಲಿ ಸಿಲುಕಿಸುವುದಾಗಿ ಆರೋಪಿ ರಾಶಿ ಬೆದರಿಕೆ ಹಾಕಿದ್ದಳು. ಕಳೆದ ವರ್ಷ ಅಕ್ಟೋಬರ್ 2 ರಂದು ದಸರಾ ಹಬ್ಬದ ವೇಳೆ ಪರಿಶೀಲಿಸಿದಾಗ ಒಡವೆಗಳು ನಾಪತ್ತೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದಿತ್ತು.
ಹೌಸ್ ಹೆಲ್ಪರ್ ಪೊಲೀಸ್ ವಶಕ್ಕೆ
ಕೊನೆಗೆ ಒಡವೆಗಳು ವಾಪಸ್ ಸಿಗುವುದಿಲ್ಲ ಎಂದು ಖಚಿತವಾದ ನಂತರ, ಕುಟುಂಬದವರು ಮೇ 19 ರಂದು ಜುಹು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೇ 21 ರಂದು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಮೇ 29 ರವರೆಗೆ ಆಕೆ ಪೊಲೀಸ್ ಕಸ್ಟಡಿಯಲ್ಲಿದ್ದಳು. ಸದ್ಯ ನಾಪತ್ತೆಯಾಗಿರುವ ಉಳಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಶೋಧ ಮುಂದುವರಿಸಿದ್ದಾರೆ. (ಏಜೆನ್ಸಿಸ್)



