Sunday, June 7, 2026
Google search engine

Homeದೇಶಕುವೈತ್‌ನಲ್ಲಿ ಮತ್ತೆ ವಿಮಾನ ಸಂಚಾರ ಆರಂಭ : ತಾತ್ಕಾಲಿಕ ನಿಷೇಧ ತೆರವು

ಕುವೈತ್‌ನಲ್ಲಿ ಮತ್ತೆ ವಿಮಾನ ಸಂಚಾರ ಆರಂಭ : ತಾತ್ಕಾಲಿಕ ನಿಷೇಧ ತೆರವು

ಕುವೈತ್ : ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕುವೈತ್‌ನ ವೈಮಾನಿಕ ವಲಯವನ್ನು (Airspace) ಶನಿವಾರ ಮಧ್ಯಾಹ್ನದಿಂದ ಮತ್ತೆ ಮುಕ್ತಗೊಳಿಸಲಾಗಿದ್ದು, ವಿಮಾನ ಸಂಚಾರ ಯಥಾಸ್ಥಿತಿಗೆ ಮರಳಿದೆ ಎಂದು ಕುವೈತ್‌ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

2 ಗಂಟೆಗಳ ಕಾಲ ಬಂದ್ ಆಗಿದ್ದ ವೈಮಾನಿಕ ವಲಯ

ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಕುವೈತ್ ನಾಗರಿಕ ವಿಮಾನಯಾನ ಪ್ರಾಧಿಕಾರವು ಶನಿವಾರ ಮುಂಜಾವಿನ ಅವಧಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗ್ಗೆ 4:15 ರಿಂದ 6:15 ರವರೆಗೆ (ಒಟ್ಟು ಎರಡು ಗಂಟೆಗಳ ಕಾಲ) ದೇಶದ ವೈಮಾನಿಕ ವಲಯವನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು. ಇರಾನ್‌ನಿಂದ ಎದುರಾದ “ಕ್ಷಿಪಣಿ ಮತ್ತು ಡ್ರೋನ್ ಭೀತಿ”ಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

11 ವಿಮಾನಗಳು ಬೇರೆಡೆಗೆ ಡೈವರ್ಟ್

ವೈಮಾನಿಕ ವಲಯವನ್ನು ಬಂದ್ ಮಾಡಿದ ಅವಧಿಯಲ್ಲಿ ಕುವೈತ್ ಏರ್ವೇಸ್ ಮತ್ತು ಜಜೀರಾ ಏರ್ವೇಸ್‌ಗೆ ಸೇರಿದ ಒಟ್ಟು 11 ವಿಮಾನಗಳನ್ನು ಹತ್ತಿರದ ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿತ್ತು. ಇವುಗಳಲ್ಲಿ ಹೆಚ್ಚಿನ ವಿಮಾನಗಳನ್ನು ಸೌದಿ ಅರೇಬಿಯಾದ ದಮ್ಮಾಮ್ ಮತ್ತು ರಿಯಾದ್ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದು, ಅಪಾಯ ದೂರಾಗಿದೆ ಎಂದು ಖಚಿತಪಟ್ಟ ನಂತರ ವಿಮಾನಗಳು ಸುರಕ್ಷಿತವಾಗಿ ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿವೆ.

ಬಹ್ರೇನ್‌ನಿಂದ ಇರಾನ್ ಕ್ರಮಕ್ಕೆ ತೀವ್ರ ಖಂಡನೆ

ಶನಿವಾರ ಇರಾನ್‌ನಿಂದ ಬಹ್ರೇನ್ ಮತ್ತು ಕುವೈತ್ ದೇಶಗಳತ್ತ 7 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಹ್ರೇನ್ ವಿದೇಶಾಂಗ ಸಚಿವಾಲಯ, “ಇದು ದೇಶದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಮತ್ತು ಗಲ್ಫ್ ಪ್ರದೇಶದ ಭದ್ರತೆಗೆ ದೊಡ್ಡ ಬೆದರಿಕೆ” ಎಂದು ಕರೆದಿದೆ.

ಎಲ್ಲಾ ಇರಾನ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ (Intercept). ಈ ಕಾರ್ಯಾಚರಣೆಯಲ್ಲಿ ಕುವೈತ್ ಮತ್ತು ಬಹ್ರೇನ್ ಸೇನೆಗಳು ತೋರಿದ ಜಾಗರೂಕತೆಯನ್ನು ಬಹ್ರೇನ್ ಸರ್ಕಾರ ಶ್ಲಾಘಿಸಿದೆ.

ಬಹ್ರೇನ್ ದೇಶವು ಇರಾನ್‌ಗೆ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ‌

ಇರಾನ್ ತಕ್ಷಣವೇ ತನ್ನ ದಾಳಿಗಳನ್ನು ನಿಲ್ಲಿಸಬೇಕು.

ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಪೂರ್ಣವಾಗಿ ಮುಕ್ತಗೊಳಿಸಬೇಕು.

ಸಮುದ್ರದಲ್ಲಿ ಅಳವಡಿಸಲಾಗಿರುವ ಮೈನ್‌ಗಳ (Sea mines/ಬಾಂಬುಗಳು) ಮಾಹಿತಿಯನ್ನು ನೀಡಬೇಕು.

ಅಲ್ಲಿ ಸಿಲುಕಿಕೊಂಡಿರುವ 20 ಸಾವಿರಕ್ಕೂ ಹೆಚ್ಚು ನಾವಿಕರು ಸುರಕ್ಷಿತವಾಗಿ ಹೊರಬರಲು ಅವಕಾಶ ಮಾಡಿಕೊಡಬೇಕು.

ಅಮೆರಿಕದ ಸೇನಾ ನೆಲೆಗಳೇ ಇರಾನ್ ಟಾರ್ಗೆಟ್ ?

ಇನ್ನೊಂದೆಡೆ, ಇರಾನ್‌ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ದಾಳಿಯ ಹೊಣೆಯನ್ನು ಒಪ್ಪಿಕೊಂಡಿದೆ. ಕುವೈತ್‌ನಲ್ಲಿರುವ ಎರಡು ಅಮೆರಿಕ ಸೇನಾ ನೆಲೆಗಳು ಮತ್ತು ಬಹ್ರೇನ್‌ ನಲ್ಲಿರುವ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಅನ್ನು (5th Fleet) ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅದು ಪ್ರತಿಪಾದಿಸಿದೆ. ಅಮೆರಿಕ ಈ ಹಿಂದೆ ನಡೆಸಿದ ಕ್ರಮಗಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಐಆರ್‌ ಜಿಸಿ (IRGC) ಸಮರ್ಥಿಸಿಕೊಂಡಿದೆ.

ಪ್ರಸ್ತುತ ಕುವೈತ್ ವಿಮಾನಯಾನ ಇಲಾಖೆಯು ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಗರಿಷ್ಠ ಸುರಕ್ಷತಾ ಮಾನದಂಡಗಳೊಂದಿಗೆ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular