ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಭಾರತಿರಾಜ ಅವರು ಬುಧವಾರ ಚೆನ್ನೈಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಕಥಾಹಂದರ ಮತ್ತು ಗ್ರಾಮೀಣ ಬದುಕಿನ ಸೊಗಡನ್ನು ತೆರೆಗೆ ತಂದು ಹೊಸ ಸಂಚಲನ ಮೂಡಿಸಿದ್ದ ಭಾರತಿರಾಜ ಅವರು ಹಲವು ದಶಕಗಳ ಕಾಲ ಸಿನಿರಂಗದಲ್ಲಿ ಸಕ್ರಿಯರಾಗಿದ್ದರು. ನಿರ್ದೇಶಕರಾಗಿ ಮಾತ್ರವಲ್ಲದೆ, ಕಥೆಗಾರ ಹಾಗೂ ನಟರಾಗಿಯೂ ಅಪಾರ ಜನಪ್ರಿಯತೆ ಗಳಿಸಿದ್ದರು.
ತಮಿಳುನಾಡಿನ ತೇಣಿ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಆರಂಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಸಿನಿಮಾ ಮೇಲಿನ ಆಸಕ್ತಿಯಿಂದ ಚೆನ್ನೈಗೆ ಬಂದು ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಳಿ ಸಹ-ನಿರ್ದೇಶಕರಾಗಿ ಅನುಭವ ಪಡೆದಿದ್ದರು.
1977ರಲ್ಲಿ ಬಿಡುಗಡೆಯಾದ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ‘ಕಿಝಕ್ಕೆ ಪೋಗುಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ನಿಝಲ್ಗಲ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದರು. ಅವರ ಸಾಧನೆಯನ್ನು ಗುರುತಿಸಿ ಒಟ್ಟು ಆರು ರಾಷ್ಟ್ರ ಪ್ರಶಸ್ತಿಗಳನ್ನು ಪ್ರದಾನಿಸಲಾಗಿತ್ತು. ಭಾರತೀಯ ಚಿತ್ರರಂಗದ ಮೇಲೆ ಅಳಿಯದ ಛಾಪು ಮೂಡಿಸಿದ ಈ ಮಹಾನ್ ಚೇತನದ ಅಗಲಿಕೆಗೆ ಸಿನಿಲೋಕ ಕಂಬನಿ ಮಿಡಿದಿದೆ.



