ಮೈಸೂರು: ಆಹಾರ ಪದಾರ್ಥಗಳ ಮಾರಾಟ ಬೀದಿ ಬದಿ, ಸಣ್ಣ, ದೊಡ್ಡ ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ನಡೆಯುತ್ತದೆ. ಗ್ರಾಹಕರಿಗೆ ಆರೋಗ್ಯಯುತ ಆಹಾರ ನೀಡುವುದು ಮಾಲೀಕರ ಕರ್ತವ್ಯವಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಆಹಾರ ಸುರಕ್ಷತಾ ಅಧಿಕಾರಿಗಳು ಒಂದು ತಿಂಗಳು ವಿಶೇಷ ತೀವ್ರ ತಪಾಸಣೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಆಹಾರ ಸುರಕ್ಷತಾ ಅಧಿಕಾರಿಗಳು ಮೈಸೂರು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಆರೋಗ್ಯ ಅಧಿಕಾರಿಗಳೊಂದಿಗೆ ತಪಾಸಣೆ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದರು.
ಆಹಾರ ಸುರಕ್ಷತೆ ಕ್ರಮಗಳನ್ನು ಅನುಸರಿಸದಿದ್ದಲ್ಲಿ ಕೂಡಲೇ ನೋಟೀಸ್ ಜಾರಿ ಮಾಡಿ, ದಂಡ ವಿಧಿಸಿ ಸ್ಥಳೀಯ ಸಂಸ್ಥೆಗಳು ನೀಡುವ ಟ್ರೇಡ್ ಲೈಸೆನ್ಸ್ ಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಿ. ಬೀದಿ ಬದಿ ಆಹಾರ ವ್ಯಾಪಾರ ಮಾಡುವವರು ಸೇರಿದಂತೆ ಸ್ಟಾರ್ ಹೋಟೆಲ್ ಗಳಲ್ಲಿ ಅನುಮಾನ ಬರುವ ಎಲ್ಲಾ ಕಡೆಗಳಲ್ಲೂ ತಪಾಸಣೆ ನಡೆಸಿ ಎಂದರು.
ಪರವಾನಗಿ ಪಡೆದ ಸಂದರ್ಭದಲ್ಲಿ ಸರ್ಕಾರ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಅನಾಹುತ ನಡೆದ ನಂತರ ಕ್ರಮಗಳ ಬಗ್ಗೆ ಚಿಂತಿಸುವ ಬದಲು ಮೊದಲೇ ಕಾರ್ಯಪ್ರವೃತ್ತರಾಗಿ, ವಿವಿಧ ಕಡೆ ಪರಿಶೀಲನೆ ನಡೆಸಿ ಪ್ರತಿ ದಿನ ಜಿಲ್ಲಾಡಳಿತಕ್ಕೆ ವರದಿ ನೀಡಿ ಎಂದರು.
ಆಹಾರ ಮಾರಾಟಗಾರರು ಗ್ರಾಹಕರ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ನಿಷೇಧಿತ ಪದಾರ್ಥಗಳನ್ನು ಬಳಸಬಾರದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಾಲಕಾಲಕ್ಕೆ ಸರ್ಕಾರದಿಂದ ನೀಡಲಾಗುವ
ನಿರ್ದೇಶನಗಳನ್ನು ಪಾಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಆಹಾರ ಸುರಕ್ಷತಾ ಅಧಿಕಾರಿ ಡಾ: ರವೀಂದ್ರ, ಕಾಂತರಾಜು ಸೇರಿ ಇನ್ನಿತರರು ಉಪಸ್ಥಿತರಿದ್ದರು.



