Monday, June 22, 2026
Google search engine

Homeರಾಜ್ಯಪ್ರಕಾಶ್ ರಾಜ್ ವಿರುದ್ಧ ವಾರಂಟ್ ಸುದ್ದಿ ಫೇಕ್: ನಟನ ಸ್ಪಷ್ಟನೆ

ಪ್ರಕಾಶ್ ರಾಜ್ ವಿರುದ್ಧ ವಾರಂಟ್ ಸುದ್ದಿ ಫೇಕ್: ನಟನ ಸ್ಪಷ್ಟನೆ

ಬೆಂಗಳೂರು: ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರು ಪ್ರತಿಕ್ರಿಯೆ ನೀಡಿ ಅದನ್ನು ಸಂಪೂರ್ಣ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದಾರೆ.

ಒಂದೇ ಹೆಸರಿನಲ್ಲಿ ನಾಲ್ಕು ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಿಲೀಪ್ ಕುಮಾರ್ ಸಲ್ಲಿಸಿದ್ದ ದೂರಿನ ಮೇರೆಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ ಎಂಬ ವರದಿಗಳು ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅಲ್ಲದೆ, ಈ ಹಿಂದೆ ಎರಡು ಬಾರಿ ವಾರಂಟ್ ಜಾರಿಯಾದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.

ಈ ಸುದ್ದಿಗಳು ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಪ್ರಕಾಶ್ ರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದರು. ವೈರಲ್ ಆಗಿದ್ದ ವರದಿಯ ಚಿತ್ರವನ್ನು ಹಂಚಿಕೊಂಡ ಅವರು, ಅದನ್ನು “ಫೇಕ್ ನ್ಯೂಸ್” ಎಂದು ಬಣ್ಣಿಸಿದರು.

“ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹರಡುತ್ತಿರುವವರು ಮಾರಿಕೊಂಡವರು. ಪಾಪ, ತುಂಬಾ ನೋವಾಗಿದೆ. ಫೇಕ್ ನ್ಯೂಸ್ ತಯಾರಿಸಿ ಹರಡುತ್ತಿದ್ದಾರೆ. #JustAsking ಮೂಲಕ ನಾನು ಅವರನ್ನು ಬ್ಯುಸಿಯಾಗಿರಿಸಿದ್ದಕ್ಕೆ ಸಂತೋಷವಾಗಿದೆ” ಎಂದು ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರ ಈ ಪ್ರತಿಕ್ರಿಯೆ ಬಳಿಕ ವಾರಂಟ್ ಕುರಿತ ಸುದ್ದಿಯ ಸತ್ಯಾಸತ್ಯತೆ ಕುರಿತು ಮತ್ತಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ.

RELATED ARTICLES
- Advertisment -
Google search engine

Most Popular