ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಂಘದಲ್ಲಿ ಭರ್ತಿಯಾಗಿರುವ ಸುಮಾರು 480 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅಲ್ಲದೆ ಒಂದು ಹುದ್ದೆಗೆ ₹10 ಲಕ್ಷದಿಂದ ₹20 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂದು ಕೆಲ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಇನ್ನು ಕೇಡರ್ ಅಂಡ್ ರಿಕ್ರೂಟ್ಮೆಂಟ್ (ಸಿ & ಆರ್) ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ನೇಮಕಾತಿ ನಡೆಸಲಾಗಿದೆ. ನಿಯಮಾನುಸಾರ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ, ಅರ್ಜಿಗಳನ್ನು ಆಹ್ವಾನಿಸಿ, ವಿದ್ಯಾರ್ಹತೆ, ವಯೋಮಿತಿ ಹಾಗೂ ಅನುಭವದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಬೇಕಾಗಿತ್ತು. ಆದರೆ ಯಾವುದೇ ಜಾಹೀರಾತು ನೀಡದೇ, ಅರ್ಜಿಗಳನ್ನು ಆಹ್ವಾನಿಸದೇ, ಸಂದರ್ಶನ ನಡೆಸದೇ ಹಾಗೂ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸದೇ ನೇಮಕಾತಿ ಆದೇಶಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಹಣ ನೀಡಿದವರಿಗೆ ಆದ್ಯತೆ ನೀಡಿ ನೇಮಕಾತಿ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇನ್ನೂ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ನಿರ್ಧಾರ ಕೈಗೊಂಡಿದ್ದರೂ, ಎಸ್‌ಡಿಎ/ಕಂಪ್ಯೂಟರ್ ಆಪರೇಟರ್ ಎಂಬ ಹೆಸರಿನಲ್ಲಿ ಹುದ್ದೆಗಳನ್ನು ಭರ್ತಿ ಮಾಡಿ, ಕಂಪ್ಯೂಟರ್ ಜ್ಞಾನವಿಲ್ಲದವರನ್ನೂ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದರಿಂದ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಅರ್ಹತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಈ ಸಂಬಂಧ ಸಹಕಾರ ಸಂಘಗಳ ನೋಂದಣಾಧಿಕಾರಿಗೆ ದೂರು ಸಲ್ಲಿಸಲಾಗಿದ್ದು, ತಮ್ಮ ಬಳಿ ಅಗತ್ಯ ಸಾಕ್ಷ್ಯಾಧಾರಗಳಿವೆ ಎಂದು ದೂರುದಾರರು ತಿಳಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದರ ನಡುವೆ ಇತ್ತೀಚಿನ ವರ್ಷಗಳಲ್ಲಿ ಸಂಘದ ಆಡಳಿತದ ವಿರುದ್ಧ ಹಲವು ವಿವಾದಗಳು ಕೇಳಿಬಂದಿದ್ದು, ಕೆಲವು ನಿರ್ದೇಶಕರು ಅವಿಶ್ವಾಸ ನಿರ್ಣಯದ ಹಿನ್ನೆಲೆ ಹುದ್ದೆ ತ್ಯಜಿಸಿರುವ ಘಟನೆಗಳೂ ನಡೆದಿವೆ. ಕೆಲ ನಿರ್ದೇಶಕರ ವಿರುದ್ಧವೂ ವಿವಿಧ ಆರೋಪಗಳು ಕೇಳಿಬಂದಿವೆ. ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಬದಲು ಆಡಳಿತದಲ್ಲಿ ವಿವಾದಗಳು ಹೆಚ್ಚಾಗಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರಬೇಕೆಂದು ದೂರುದಾರರು ಆಗ್ರಹಿಸಿದ್ದಾರೆ.



