Wednesday, July 1, 2026
Google search engine

Homeರಾಜ್ಯನಮ್ಮ ಮೆಟ್ರೋ ಸೇವಾ ವ್ಯತ್ಯಯಗಳ ತನಿಖೆಗೆ ಆದೇಶ: ಸಮಗ್ರ ವರದಿ ಸಲ್ಲಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ

ನಮ್ಮ ಮೆಟ್ರೋ ಸೇವಾ ವ್ಯತ್ಯಯಗಳ ತನಿಖೆಗೆ ಆದೇಶ: ಸಮಗ್ರ ವರದಿ ಸಲ್ಲಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ

ಬೆಂಗಳೂರು: ನಮ್ಮ ಮೆಟ್ರೋ ರೈಲು ಸೇವೆಗಳಲ್ಲಿ ಪದೇಪದೇ ಉಂಟಾಗುತ್ತಿರುವ ತಾಂತ್ರಿಕ ದೋಷಗಳು ಹಾಗೂ ಸೇವಾ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ, ಕೈಗೊಂಡಿರುವ ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು (CCRS) ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ಕ್ಕೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕಳೆದ ಮೂರು ವರ್ಷಗಳಲ್ಲಿ ಮೆಟ್ರೋ ಸೇವೆಯಲ್ಲಿ ಸಂಭವಿಸಿರುವ ಸುಮಾರು 20 ವ್ಯತ್ಯಯಗಳ ಕುರಿತು ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಜೂನ್ 23ರಂದು ಪರ್ಪಲ್ ಲೈನ್‌ನಲ್ಲಿ ಸಂಭವಿಸಿದ ತಾಂತ್ರಿಕ ದೋಷದ ಬಳಿಕ ಜೂನ್ 25ರಂದು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು ಎಂದು ತಿಳಿಸಿದ್ದಾರೆ.

ದೂರಿನ ಪರಿಶೀಲನೆಯ ಬಳಿಕ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಜನಕ್ ಕುಮಾರ್ ಗರ್ಗ್, ಜೂನ್ 23ರ ಘಟನೆಯಷ್ಟೇ ಅಲ್ಲದೆ ಕಳೆದ ಮೂರು ವರ್ಷಗಳ ಎಲ್ಲಾ ಸೇವಾ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಜೊತೆಗೆ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆಯ ದಕ್ಷತೆಯ ಕುರಿತು ಆಡಿಟ್ ನಡೆಸುವಂತೆಯೂ ಆದೇಶಿಸಿದ್ದಾರೆ.

ಈ ಕುರಿತ ಅಧಿಕೃತ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಬಿಎಂಆರ್‌ಸಿಎಲ್ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರನ್ನು ಟ್ಯಾಗ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2024ರಿಂದೀಚೆಗೆ ನಮ್ಮ ಮೆಟ್ರೋದಲ್ಲಿ ಸುಮಾರು 20 ಬಾರಿ ಸೇವಾ ವ್ಯತ್ಯಯಗಳು ವರದಿಯಾಗಿದ್ದು, ಇದು ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯಗಳನ್ನು ತೋರಿಸುತ್ತದೆ. ಪ್ರಯಾಣಿಕರ ಸುರಕ್ಷತೆ, ವಿಶ್ವಾಸಾರ್ಹತೆ ಹಾಗೂ ತಡೆರಹಿತ ಸೇವೆ ಒದಗಿಸುವುದು ಬಿಎಂಆರ್‌ಸಿಎಲ್‌ನ ಮೊದಲ ಆದ್ಯತೆಯಾಗಬೇಕು. ವ್ಯವಸ್ಥಿತ ದೋಷಗಳನ್ನು ತಕ್ಷಣ ಸರಿಪಡಿಸಿ, ಪ್ರಯಾಣಿಕರ ವಿಶ್ವಾಸವನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular