ನವದೆಹಲಿ: ದೇಶದಲ್ಲಿ ಉಂಟಾಗುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು ತನ್ನ ಶಿಫಾರಸುಗಳನ್ನು ಆದಷ್ಟು ಶೀಘ್ರವಾಗಿ ಸಲ್ಲಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ.
ನವದೆಹಲಿಯಲ್ಲಿ ಸಮಿತಿಯೊಂದಿಗೆ ನಡೆದ ಸಭೆಯ ವೇಳೆ ಸಚಿವರು ಈ ನಿರ್ದೇಶನ ನೀಡಿದ್ದಾರೆ. ಸಭೆಯಲ್ಲಿ ಸಮಿತಿಯು ತನ್ನ ಮುಂದಿನ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿತು.
ಸಮಿತಿಯ ಮುಂದಿನ ಕಾರ್ಯಯೋಜನೆಗಳು ಹೀಗಿದೆ
ಕ್ಷೇತ್ರ ಭೇಟಿ : ಜನಸಂಖ್ಯಾ ಬದಲಾವಣೆಗಳ ಬಗ್ಗೆ ಖಚಿತ ಮಾಹಿತಿ ಪಡೆಯಲು ಮತ್ತು ಆಯಾ ರಾಜ್ಯಗಳ ಆಡಳಿತ ಮಂಡಳಿಯೊಂದಿಗೆ ಚರ್ಚಿಸಲು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮಿತಿಯು ಭೇಟಿ ನೀಡಲಿದೆ.
ಸಮಾಲೋಚನೆ : ಈ ಸಂಬಂಧ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಮಾಹಿತಿ ಮತ್ತು ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗುವುದು.
ಪೂರ್ವ ಸಿದ್ಧತೆ : ಕ್ಷೇತ್ರ ಭೇಟಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲು ಸಮಿತಿಯು ಈಗಾಗಲೇ ಒಂದು ಸಮಗ್ರ ಪ್ರಶ್ನಾವಳಿಯನ್ನು ಸಿದ್ಧಪಡಿಸಿದೆ.
ಸಮಿತಿಯ ಕಾರ್ಯತಂತ್ರವನ್ನು ಶ್ಲಾಘಿಸಿದ ಗೃಹ ಸಚಿವ ಅಮಿತ್ ಶಾ ಅವರು, ಸಮಿತಿಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮತ್ತು ರಾಜ್ಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಒದಗಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಹಿನ್ನೆಲೆ
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷದ ಆಗಸ್ಟ್ 15 ರಂದು ‘ಉನ್ನತ ಮಟ್ಟದ ಜನಸಂಖ್ಯಾ ಮಿಷನ್’ (High-Powered Demography Mission) ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದರಂತೆ, ಅಕ್ರಮ ವಲಸೆ ಮತ್ತು ಇತರ ಅಸಹಜ ಕಾರಣಗಳಿಂದ ಉಂಟಾಗುವ ಜನಸಂಖ್ಯಾ ಬದಲಾವಣೆಗಳನ್ನು ಅಧ್ಯಯನ ಮಾಡಲು, ಅವುಗಳ ಮೂಲ ಕಾರಣಗಳನ್ನು ವಿಶ್ಲೇಷಿಸಲು ಹಾಗೂ ಸೂಕ್ತ ನೀತಿ, ಶಾಸನಾತ್ಮಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಶಿಫಾರಸು ಮಾಡಲು ಈ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನೌಲ್ಕರ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.



