ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸುಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಜುಲೈ 17 ರಿಂದ ಆರಂಭವಾಗಲಿರುವ ಆಷಾಢ ಶುಕ್ರವಾರಗಳ ವಿಶೇಷ ಪೂಜೆಗೆ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ಹಲವು ಮಹತ್ವದ ಕ್ರಮಗಳನ್ನು ಘೋಷಿಸಿದ್ದಾರೆ.
ಈ ಬಾರಿ ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡುವ ಉದ್ದೇಶದಿಂದ ₹300 ವಿಶೇಷ ದರ್ಶನ ಟಿಕೆಟ್ಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಇನ್ನು ಮುಂದೆ ಕೇವಲ ₹2,000 ಮುಖಬೆಲೆಯ ನೇರ ದರ್ಶನ ಟಿಕೆಟ್ಗಳು ಮಾತ್ರ ಲಭ್ಯವಿರಲಿವೆ. ರಾಜಕಾರಣಿಗಳು ಅಥವಾ ಪ್ರಭಾವಿ ವ್ಯಕ್ತಿಗಳ ಶಿಫಾರಸು ಪತ್ರದ ಆಧಾರದ ಮೇಲೆ ಯಾವುದೇ ವಿಶೇಷ ದರ್ಶನದ ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಆಷಾಢ ಶುಕ್ರವಾರಗಳಂದು ವಿಐಪಿ ದರ್ಶನಕ್ಕೆ ಬೆಳಿಗ್ಗೆ 5.30ರಿಂದ 9.30ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನಂತರದ ಅವಧಿಯನ್ನು ಸಂಪೂರ್ಣವಾಗಿ ಸಾರ್ವಜನಿಕರ ದರ್ಶನಕ್ಕೆ ಮೀಸಲಿಡಲಾಗುತ್ತದೆ. ಭಕ್ತರ ಅನುಕೂಲ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಜೊತೆಗೆ ಲಲಿತ ಮಹಲ್ ಅರಮನೆ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಬೆಟ್ಟಕ್ಕೆ ಕೆಎಸ್ಆರ್ಟಿಸಿ ವತಿಯಿಂದ ಉಚಿತ ಬಸ್ ಸೇವೆ ಒದಗಿಸಲಾಗುತ್ತದೆ. ಇದೇ ವೇಳೆ ದೇವಸ್ಥಾನದ ಪಾವಿತ್ರ್ಯತೆ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಬೆಟ್ಟದ ಆವರಣಕ್ಕೆ ಚಪ್ಪಲಿ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಈ ವೇಳೆ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಭದ್ರತೆ, ಸಂಚಾರ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳ ಕುರಿತು ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.



