Wednesday, July 1, 2026
Google search engine

Homeರಾಜ್ಯಸುದ್ದಿಜಾಲರೈಲ್ವೆ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಕಾಡಾನೆ ; ರಕ್ಷಣಾ ಕಾರ್ಯಾಚರಣೆ ಯಶಸ್ವಿ

ರೈಲ್ವೆ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಕಾಡಾನೆ ; ರಕ್ಷಣಾ ಕಾರ್ಯಾಚರಣೆ ಯಶಸ್ವಿ

ಕನಕಪುರ (ರಾಮನಗರ): ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ಕಾವೇರಿ ವನ್ಯಜೀವಿ ಧಾಮದ ಗಡಿಯಲ್ಲಿ ಅಳವಡಿಸಿದ್ದ ರೈಲ್ವೆ ಬ್ಯಾರಿಕೇಡ್ ದಾಟಲು ಯತ್ನಿಸಿದ ಕಾಡಾನೆಯೊಂದು ಮಧ್ಯದಲ್ಲಿ ಸಿಲುಕಿ ಕೆಲಕಾಲ ನರಳಾಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕಾವೇರಿ ವನ್ಯಜೀವಿ ಧಾಮದಿಂದ ರಾತ್ರಿ ವೇಳೆ ಕಾಡಂಚಿನ ರೈತರ ಜಮೀನಿಗೆ ಬಂದಿದ್ದ ಆನೆ ಮೇವು ತಿಂದ ಬಳಿಕ ನಸುಕಿನಲ್ಲಿ ಮರಳುವಾಗ ಬ್ಯಾರಿಕೇಡ್ ದಾಟಲು ಯತ್ನಿಸಿದೆ. ದನಕರುಗಳ ಸಂಚಾರಕ್ಕಾಗಿ ನಿರ್ಮಿಸಲಾದ ಸಣ್ಣ ಕಿಂಡಿಯ ಮೂಲಕ ಹಾದುಹೋಗಲು ಮುಂದಾದ ಆನೆ ಅರ್ಧ ಭಾಗ ಒಳಗೆ ನುಗ್ಗಿದ ಬಳಿಕ ಮುಂದಕ್ಕೆ ಹೋಗಲು ಸಾಧ್ಯವಾಗದೆ ಸಿಲುಕಿಕೊಂಡಿದೆ.

ಬೆಳಿಗ್ಗೆ ಜಮೀನಿಗೆ ಬಂದ ರೈತರು ಆನೆ ಸಿಲುಕಿರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಪಶು ವೈದ್ಯಾಧಿಕಾರಿಗಳು ಹಾಗೂ ಕಬ್ಬಿಣ ಕತ್ತರಿಸುವ ಯಂತ್ರವನ್ನು ಕರೆಸಿದ್ದಾರೆ.

ವೈದ್ಯರು ಆನೆಗೆ ಅನಸ್ತೇಷಿಯಾ ನೀಡಿ ಕೆಲವೇ ಕ್ಷಣಗಳಲ್ಲಿ ಅದನ್ನು ಶಾಂತಗೊಳಿಸಿದ್ದಾರೆ. ಬಳಿಕ ಯಂತ್ರದ ಸಹಾಯದಿಂದ ಆನೆ ಸುರಕ್ಷಿತವಾಗಿ ಹಾದುಹೋಗಲು ಸಾಧ್ಯವಾಗುವಂತೆ ಬ್ಯಾರಿಕೇಡ್‌ನ ಭಾಗವನ್ನು ಕತ್ತರಿಸಲಾಯಿತು. ಮಧ್ಯಾಹ್ನ ಸುಮಾರು 12.30ರ ವೇಳೆಗೆ ಆನೆಗೆ ಪ್ರಜ್ಞೆ ಮರಳಿದ ಬಳಿಕ ಅದನ್ನು ಕಾವೇರಿ ವನ್ಯಜೀವಿಧಾಮದ ಒಳಭಾಗಕ್ಕೆ ಸುರಕ್ಷಿತವಾಗಿ ಓಡಿಸಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಕಾವೇರಿ ವನ್ಯಜೀವಿಧಾಮದ ಎಸಿಎಫ್ ನಾಗೇಂದ್ರ, ಆರ್‌ಎಫ್‌ಒ ಶ್ರೀಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು.

RELATED ARTICLES
- Advertisment -
Google search engine

Most Popular