Thursday, July 2, 2026
Google search engine

Homeರಾಜಕೀಯಆರ್‌ಎಸ್‌ಎಸ್‌ಗೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ : ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ತಿರುಗೇಟು

ಆರ್‌ಎಸ್‌ಎಸ್‌ಗೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ : ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ತಿರುಗೇಟು

ಬೆಳಗಾವಿ : ಆರ್‌ಎಸ್‌ಎಸ್‌ಗೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದ್ದು, ಸರ್ಕಾರ ಎಲ್ಲ ಸಂಘಟನೆಗಳಿಗೆ ನೋಂದಣಿ ಕಡ್ಡಾಯಗೊಳಿಸುವ ಕಾನೂನು ಜಾರಿಗೊಳಿಸಿದರೆ ಅದನ್ನು ಪಾಲಿಸುತ್ತೇವೆ ಎಂದು ಆರ್‌ಎಸ್‌ಎಸ್ ತಿಳಿಸಿದ್ದು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ನೋಂದಣಿ ಹಾಗೂ ಹಣಕಾಸು ಪಾರದರ್ಶಕತೆ ಕುರಿತ ಪ್ರಶ್ನೆಗಳಿಗೆ ಸಂಘ ಈ ಮೂಲಕ ಪ್ರತಿಕ್ರಿಯೆ ನೀಡಿದೆ.

ಬೆಳಗಾವಿಯಲ್ಲಿ ನಡೆದ ಆರ್‌ಎಸ್‌ಎಸ್ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪ್ರಚಾರಕ ಭರತ್‌ಕುಮಾರ್, ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ ಆರ್‌ಎಸ್‌ಎಸ್ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಭವಿಷ್ಯದಲ್ಲಿ ಸರ್ಕಾರ ಎಲ್ಲ ಸಂಘಟನೆಗಳಿಗೆ ನೋಂದಣಿ ಕಡ್ಡಾಯಗೊಳಿಸಿದರೆ ಅದನ್ನು ಸಂಘ ಸಂಪೂರ್ಣವಾಗಿ ಪಾಲಿಸಲಿದೆ ಎಂದರು.

ಈ ಸಂದರ್ಭದಲ್ಲಿ ಕುಟುಂಬದ ಉದಾಹರಣೆ ನೀಡಿದ ಅವರು, ಕುಟುಂಬವನ್ನು ಪ್ರತ್ಯೇಕ ಸಂಸ್ಥೆಯಾಗಿ ನೋಂದಾಯಿಸದೇ ಅದರ ಸದಸ್ಯರು ಒಟ್ಟಾಗಿ ಕಾರ್ಯನಿರ್ವಹಿಸುವಂತೆಯೇ, ಆರ್‌ಎಸ್‌ಎಸ್ ಕೂಡ ಈಗಿನ ಕಾನೂನು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸಂಘ ಯಾವುದೇ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಅಥವಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ. ಸ್ವಯಂಸೇವಕರು ವರ್ಷಕ್ಕೊಮ್ಮೆ ಸ್ವಯಂಪ್ರೇರಿತವಾಗಿ ನೀಡುವ ‘ಗುರುದಕ್ಷಿಣೆ’ಯೇ ಸಂಘದ ಪ್ರಮುಖ ಆರ್ಥಿಕ ಮೂಲವಾಗಿದೆ ಎಂದು ಭರತ್‌ಕುಮಾರ್ ತಿಳಿಸಿದರು.

ಸಂಘಕ್ಕೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರುತ್ತದೆ. ಸಂಗ್ರಹವಾಗುವ ಹಣವನ್ನು ಮರುದಿನವೇ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಯಾವುದೇ ಹಣವನ್ನು ನಗದು ರೂಪದಲ್ಲಿ ಉಳಿಸಿಕೊಳ್ಳುವುದಿಲ್ಲ. ಅಗತ್ಯವಿರುವಷ್ಟೇ ಹಣವನ್ನು ಸಂಗ್ರಹಿಸಿ, ಪ್ರತಿಯೊಂದು ವೆಚ್ಚದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ, ಜುಲೈ 10ರಿಂದ 12ರವರೆಗೆ ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ನ ವಾರ್ಷಿಕ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳ ಹಿರಿಯ ಪ್ರಚಾರಕರು ಹಾಗೂ ಸಂಘದ ಉನ್ನತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ಜುಲೈ 6ರಂದು ಬೆಳಗಾವಿಗೆ ಆಗಮಿಸಿ, ಸುಮಾರು ಎಂಟು ದಿನಗಳ ಕಾಲ ನಗರದಲ್ಲಿ ತಂಗಲಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular