ರಾಮನಗರ : ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ಕಾವೇರಿ ಕ್ವಾರಿಯಲ್ಲಿ ಸಂಭವಿಸಿದ ಭೀಕರ ಕಲ್ಲುಬಂಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಗುರುವಾರ ಬೆಳಗ್ಗಿನ ಜಾವ ನಡೆದ ಈ ದಾರುಣ ದುರಂತದಲ್ಲಿ ಏಳು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದರು.
ಮೂವರ ಬಂಧನ, ಎಫ್ಐಆರ್ ದಾಖಲು
ದುರಂತ ಸಂಭವಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ತಾವರೆಕೆರೆ ಠಾಣೆಯ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಪಾಂಡುರಂಗ (ಸಾಯಿ ರಾಮ್ ಕ್ರಷರ್ ಮಾಲೀಕ), ಲೋಕೇಶ್ (ಕ್ರಷರ್ ಹಾಗೂ ಕ್ವಾರಿ ಇನ್ಚಾರ್ಜ್), ರಾಜು (ಕಾವೇರಿ ಕ್ರಷರ್ನ ಲೋಕಲ್ ಇನ್ಚಾರ್ಜ್)
ಘಟನೆಯಿಂದ ಕೂದಲೆಳೆಗಳ ಅಂತರದಲ್ಲಿ ಬದುಕುಳಿದ ಕಾರ್ಮಿಕ ಗೋಪಿಕೃಷ್ಣನ್ ಟಿ. ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಈ ಬಂಧನ ಪ್ರಕ್ರಿಯೆ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ
ಕೇಂದ್ರ ವಲಯದ ಐಜಿಪಿ ಎಸ್.ಗಿರೀಶ್ ಅವರು ನೀಡಿರುವ ಮಾಹಿತಿ ಪ್ರಕಾರ, ಘಟನೆಯ ದಿನದಂದು ಕ್ವಾರಿಯ ಕೆಳಭಾಗದಲ್ಲಿ ಒಟ್ಟು 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬೃಹತ್ ಬಂಡೆಯೊಂದು ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಮೂರು ಟ್ರ್ಯಾಕ್ಟರ್ಗಳು ಸಂಪೂರ್ಣ ಜಖಂಗೊಂಡಿವೆ.
ಮೃತರ ವಿವರ: ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಗಾಯಾಳುಗಳಿಗೆ ಚಿಕಿತ್ಸೆ : ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗುಲಾಬ್ ಸಿಂಗ್, ರಾಜ್ ಪಾಲ್, ಚೋಟು, ನೋಹರ್ ಸಿಂಗ್ ಮತ್ತು ಆನಂದ್ ಅವರನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಓರ್ವನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡ ಪ್ರಮುಖ ಆರೋಪಿಗಳು
ಪೊಲೀಸರು ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರೂ, ದುರಂತ ನಡೆದ ಕಾವೇರಿ ಕ್ರಷರ್ನ ಅಸಲಿ ಮಾಲೀಕ ಉದಯ್ ಶಂಕರ್, ಬಸವೇಶ್ವರ ಕ್ರಷರ್ ಮಾಲೀಕ ಡಿ. ಆನಂದಸ್ವಾಮಿ ಹಾಗೂ ಹಿಟಾಚಿ ಚಾಲಕ ತಿರುಪತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಸದ್ಯ ತಲೆಮರೆಸಿಕೊಂಡಿರುವ ಈ ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. (ಏಜೆನ್ಸಿಸ್)



