Friday, July 3, 2026
Google search engine

Homeರಾಜ್ಯಕರ್ನಾಟಕದಾದ್ಯಂತ ವರುಣಾರ್ಭಟ ಮುಂದುವರಿಕೆ : ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್; ಬೆಂಗಳೂರಿನಲ್ಲಿ ಗಾಳಿ ಸಹಿತ...

ಕರ್ನಾಟಕದಾದ್ಯಂತ ವರುಣಾರ್ಭಟ ಮುಂದುವರಿಕೆ : ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್; ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ ಮುನ್ಸೂಚನೆ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಭಾಗದಲ್ಲಿ ಇನ್ನು ಕೆಲವು ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ವರುಣಾರ್ಭಟ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಜುಲೈ 5ರ ವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡು ಭಾಗದ ಹಲವೆಡೆ ಜುಲೈ 7ರ ವರೆಗೆ ವರ್ಷಧಾರೆ ಮುಂದುವರಿಯುವ ನಿರೀಕ್ಷೆಯಿದೆ.

ಕರಾವಳಿ ಮತ್ತು ಮಲೆನಾಡಿಗೆ ಬಿರುಗಾಳಿ ಎಚ್ಚರಿಕೆ

ಮಳೆಯ ಜೊತೆಗೆ ರಾಜ್ಯದ ಹಲವೆಡೆ ತೀವ್ರ ಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ 30-40 ಕಿಲೋ ಮೀಟರ್ ವೇಗದ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡು: ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ಬಳ್ಳಾರಿಯ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇತರ ಜಿಲ್ಲೆಗಳು: ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲೂ ವರುಣನ ಆಗಮನವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.

ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?

ರಾಜಧಾನಿ ಬೆಂಗಳೂರಿನಲ್ಲಿ ನಾಳೆ ದಿನವಿಡೀ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಮಳೆಯೊಂದಿಗೆ ನಗರದಲ್ಲಿ ದಿನವಿಡೀ ಬಲವಾದ ಗಾಳಿ ಬೀಸಲಿದ್ದು, ಕೆಲವೆಡೆ ಗಾಳಿಯ ವೇಗವು ಗಂಟೆಗೆ 56 ಕಿಲೋ ಮೀಟರ್‌ಗಿಂತಲೂ ಹೆಚ್ಚು ಇರಲಿದೆ ಎಂದು ಎಚ್ಚರಿಸಲಾಗಿದೆ.

ನಗರದ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular