Monday, July 6, 2026
Google search engine

Homeಕ್ರೀಡೆಮಹಿಳಾ ಟಿ20 ವಿಶ್ವಕಪ್ : ಇಂಗ್ಲೆಂಡ್ ತಂಡವನ್ನು ಸೋಲಿಸಿ ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಆದ...

ಮಹಿಳಾ ಟಿ20 ವಿಶ್ವಕಪ್ : ಇಂಗ್ಲೆಂಡ್ ತಂಡವನ್ನು ಸೋಲಿಸಿ ದಾಖಲೆಯ 7ನೇ ಬಾರಿಗೆ ಚಾಂಪಿಯನ್ ಆದ ಆಸ್ಟ್ರೇಲಿಯಾ!

ನವದೆಹಲಿ : ಮಹಿಳಾ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ದಾಖಲೆಯ 7ನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ನಡೆದ ಪ್ರಶಸ್ತಿ ಜಂಟಿ ಹಣಾಹಣಿಯಲ್ಲಿ ಬೆತ್ ಮೂನಿ ಮತ್ತು ಫೋಬೆ ಲಿಚ್‌ಫೀಲ್ಡ್ ಅವರ ಶತಕದ ಜೊತೆಯಾಟವು ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವು 2010, 2012, 2014, 2018, 2020 ಮತ್ತು 2023 ರಲ್ಲಿ ಚಾಂಪಿಯನ್ ಆಗಿತ್ತು. ಇತ್ತ ಇಂಗ್ಲೆಂಡ್ ತಂಡ 2009 ರಲ್ಲಿ ಕೇವಲ ಒಂದು ಬಾರಿ ಮಾತ್ರ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಇಂಗ್ಲೆಂಡ್ ಗಳಿಸಿದ್ದು 150 ರನ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ತಂಡದ ಆರಂಭ ಉತ್ತಮವಾಗಿರಲಿಲ್ಲ, ಕೇವಲ 7 ರನ್ ಗಳಿಸುವಷ್ಟರಲ್ಲಿ ಎಮಿ ಜೋನ್ಸ್ (6) ರನ್ ಗಳಿಸಿ ಔಟಾದರು. ಇದಾದ ಬಳಿಕ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಅವರು ಡ್ಯಾನಿ ವ್ಯಾಟ್-ಹಾಡ್ಜ್ (8) ಅವರೊಂದಿಗೆ ಎರಡನೇ ವಿಕೆಟ್‌ಗೆ 25 ರನ್ ಮತ್ತು ಅಲೈಸ್ ಕ್ಯಾಪ್ಸೆ (23) ಅವರೊಂದಿಗೆ ಮೂರನೇ ವಿಕೆಟ್‌ಗೆ 25 ರನ್‌ಗಳ ಜೊತೆಯಾಟವಾಡಿದರು.

ಇನ್ನಿಂಗ್ಸ್ ಮುನ್ನಡೆಸಿದ ಸಿವರ್-ಬ್ರಂಟ್ ಮತ್ತು ಫ್ರೇಯಾ ಕೆಂಪ್

ಒಂದು ಹಂತದಲ್ಲಿ ಇಂಗ್ಲೆಂಡ್ 10.5 ಓವರ್‌ಗಳಲ್ಲಿ 4 ವಿಕೆಟ್‌ಗೆ 70 ರನ್ ಗಳಿಸಿ ತತ್ತರಿಸುತ್ತಿತ್ತು. ಆದರೆ ಆ ನಂತರ ಜೊತೆಯಾದ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಮತ್ತು ಫ್ರೇಯಾ ಕೆಂಪ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ, ಐದನೇ ವಿಕೆಟ್‌ಗೆ 55 ಎಸೆತಗಳಲ್ಲಿ 80 ರನ್‌ಗಳ ಅಜೇಯ ಜೊತೆಯಾಟದ ಮೂಲಕ ತಂಡವನ್ನು ಚೇತರಿಸಿಕೊಂಡರು.

ಸಿವರ್-ಬ್ರಂಟ್ 53 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅಜೇಯ 58 ರನ್ ಗಳಿಸಿದರೆ, ಫ್ರೇಯಾ ಕೆಂಪ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 44 ರನ್ ಚಚ್ಚಿದರು. ಆಸ್ಟ್ರೇಲಿಯಾ ಪರ ಕಿಮ್ ಗಾರ್ತ್, ಲೂಸಿ ಹ್ಯಾಮಿಲ್ಟನ್, ಸೋಫಿ ಮೊಲಿನೆಕ್ಸ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ತಲಾ ಒಂದು ವಿಕೆಟ್ ಪಡೆದರು.

ಮೂನಿ-ಲಿಚ್‌ಫೀಲ್ಡ್ ಜೋಡಿಯಿಂದ ಸುಲಭ ಜಯ

151 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 17.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಜಾರ್ಜಿಯಾ ವೋಲ್ 9 ರನ್ ಗಳಿಸಿ ಔಟಾದರಾದರೂ, ಆ ನಂತರ ಜೊತೆಯಾದ ಬೆತ್ ಮೂನಿ ಮತ್ತು ಫೋಬೆ ಲಿಚ್‌ಫೀಲ್ಡ್ ಎರಡನೇ ವಿಕೆಟ್‌ಗೆ ಕೇವಲ 67 ಎಸೆತಗಳಲ್ಲಿ 100 ರನ್ ಸೇರಿಸಿ ತಂಡದ ಗೆಲುವಿಗೆ ಬಲಿಷ್ಠ ಅಡಿಪಾಯ ಹಾಕಿದರು.

ಬೆತ್ ಮೂನಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್

ಫೋಬೆ ಲಿಚ್‌ಫೀಲ್ಡ್ ಕೇವಲ 2 ರನ್‌ಗಳಿಂದ ತಮ್ಮ ಅರ್ಧಶತಕವನ್ನು ಮಿಸ್ ಮಾಡಿಕೊಂಡರು. ಅವರು 35 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 48 ರನ್ ಗಳಿಸಿ ಔಟಾದರು. ತದನಂತರ ಬೆತ್ ಮೂನಿ ಅವರು ಎಲಿಸ್ ಪೆರ್ರಿ ಅವರೊಂದಿಗೆ 23 ರನ್‌ಗಳ ಜೊತೆಯಾಟ ಪ್ರದರ್ಶಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮೂನಿ 49 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 64 ರನ್ ಬಾರಿಸಿದರು. ಕೊನೆಯಲ್ಲಿ ಎಲಿಸ್ ಪೆರ್ರಿ 13 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ದಾಖಲೆಯ 7ನೇ ಪ್ರಶಸ್ತಿಯತ್ತ ಮುನ್ನಡೆಸಿದರು. ಇಂಗ್ಲೆಂಡ್ ಪರ ಚಾರ್ಲೊಟ್ ಡೀನ್, ಲಾರೆನ್ ಬೆಲ್ ಮತ್ತು ಸೋಫಿ ಎಕ್ಲಿಸ್ಟೋನ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular