ವರುಣ ಮುನಿಸಿಕೊಂಡ ಕಾರಣ ಕೃಷಿಕರು ಕಂಗಾಲಾಗಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ ಹಳ್ಳಿಗಳಲ್ಲಿ ವಿವಿಧ ಆಚರಣೆ ನಡೆಯುತ್ತಿವೆ. ಅಂತೆಯೇ ಮೂಡಲಗಿ ತಾಲ್ಲೂಕಿನ ಮುನ್ಯಾಳದಲ್ಲಿ ಭಾನುವಾರ ಕತ್ತೆಗಳ ಮದುವೆ ಮಾಡಲಾಯಿತು.
ಸಾಮಾನ್ಯವಾಗಿ ನಡೆಯುವ ವಧು-ವರನ ಮದುವೆಗೂ ಇದಕ್ಕೂ ಏನು ವ್ಯತ್ಯಾಸ ಇರಲಿಲ್ಲ. ಮುನ್ಯಾಳದ ಹನುಮಾನ ದೇವಸ್ಥಾನದ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಜರುಗಿದ ಕತ್ತೆಗಳ ಮದುವೆಯಲ್ಲಿ ಎರಡೂ ಕತ್ತೆಗಳು ಶಾಸ್ತ್ರೋಕ್ತವಾಗಿ ವಿವಾಹ ಮಾಡಲಾಯಿತು.
ಗಂಡು ಕತ್ತೆಗೆ ಕಾಂತೇಶ ಮತ್ತು ಹೆಣ್ಣು ಕತ್ತೆಗೆ ಕಸ್ತೂರಿ ಎಂದು ನಾಮಕರಣ ಮಾಡಲಾಗಿತ್ತು. ಅರಿಸಿನಶಾಸ್ತ್ರ, ನೂಲು ಸುತ್ತುವ ಕಾರ್ಯಕ್ರಮ, ಹೀಗೆ ಮನುಷ್ಯರ ಮದುವೆಯಲ್ಲಿ ನಡೆಯುವ ಶಾಸ್ತ್ರ ಪ್ರಕಾರ ಮದುವೆ ಜರುಗಿತು.
ರಬಕವಿಯಿಂದ ಭಾನುವಾರ ಬೆಳಿಗ್ಗೆ ಕತ್ತೆಗಳನ್ನು ತರಲಾಯಿತು. ಬಾಸಿಂಗ, ಹೊಸ ಬಟ್ಟೆ, ತಾಳಿ ಮತ್ತಿತರ ವಸ್ತು ಬಳಸಿ, ಥೇಟ್ ವಧು–ವರನಂತೆ ಅವುಗಳನ್ನು ಅಲಂಕರಿಸಲಾಯಿತು.
ಗ್ರಾಮೀಣ ಭಾಗದ ಮಾದರಿಯಲ್ಲಿ ಮದುವೆ ಮಾಡಿಸಲಾಯಿತು. ಮದುವೆ ನಂತರ ಇಡೀ ಊರಲ್ಲಿ ಅವುಗಳ ಮೆರವಣಿಗೆ ಮಾಡಲಾಯಿತು. ಜಾನಪದ ವಾದ್ಯಗಳು ರಂಗು ತಂದವು. ಈ ಸಮಾರಂಭಕ್ಕೆ ಸಾಕ್ಷಿಯಾದ ಮೂರುನೂರಕ್ಕೂ
ಅಧಿಕ ಜನರಿಗೆ ಸಿಹಿಯೂಟ ಉಣಬಡಿಸಲಾಯಿತು. ಸುಮಾರು ಇಪ್ಪತ್ತು ವರ್ಷಗಳ ಬಳಿಕ ನಡೆಯುತ್ತಿರುವ ಇಂಥ ಆಚರಣೆಗೆ ಆರವತ್ತು ಸಾವಿರ ಖರ್ಚು ಮಾಡಿದ್ದ ಗ್ರಾಮಸ್ಥರು.



