ಚಾಮರಾಜನಗರ : ಡಾ.ಬಾಬು ಜಗಜೀವನ್ ರಾಂ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ರಾಂ ಅವರ ಪುಣ್ಯಸ್ಮರಣೆ ಅಂಗವಾಗಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬಾಬು ಜಗಜೀವನ್‌ರಾಂ ಅವರು ಕಾರ್ಮಿಕ, ಆಹಾರ ಮತ್ತು ಕೃಷಿ ಹಾಗೂ ರಕ್ಷಣಾ ಸಚಿವರಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆಹಾರ ಮತ್ತು ಕೃಷಿ ಸಚಿವರಾಗಿ ದೇಶದಲ್ಲಿ ಹಸಿರು ಕ್ರಾಂತಿ ತರುವ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲು ಕಾರಣರಾದರು ಎಂದರು.ಬಾಬೂಜಿ ಅವರು ಒಂದು ವರ್ಗಕ್ಕೆ ಸೀಮಿತರಲ್ಲ. ಅಲ್ಲದೇ ಬಾಬೂಜಿ ಅವರು ಭಾರತದಲ್ಲಿಯೇ ಅತ್ಯಂತ ಸುದೀರ್ಘ ಅವಧಿಗೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಇವರ ಮಾರ್ಗದರ್ಶನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು ಜಿಲ್ಲಾಡಳಿತ ಭವನ ಮುಂಭಾಗ ಬಾಬೂಜಿ ಪ್ರತಿಮೆ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣ ಕುರಿತು ಪ್ರಶ್ನಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು ಮಾತನಾಡಿ, ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಅಲ್ಲದೇ ಭವನ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಹಾಗೂ ಮುಖಂಡರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಮುಖಂಡರಾದ ಬಸವನಪುರ ರಾಜಶೇಖರ್, ಸಿ.ಎಂ.ನರಸಿಂಹಮೂರ್ತಿ ಸೇರಿದಂತೆ ಇತರರಿದ್ದರು.



