ದುಬೈ : ಇತ್ತೀಚೆಗೆ ಮುಕ್ತಾಯಗೊಂಡ 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಬೆತ್ ಮೂನಿ, ಐಸಿಸಿ ಮಹಿಳಾ ಟಿ20 ಅಂತಾರಾಷ್ಟ್ರೀಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್ ಶ್ರೀ ಚರಣಿ ತಮ್ಮ ನಂ.1 ಸ್ಥಾನವನ್ನು ಗಟ್ಟಿಯಾಗಿ ಕಾಯ್ದುಕೊಂಡಿದ್ದಾರೆ.
ಮೂನಿ ವಿಶ್ವಕಪ್ ಟೂರ್ನಿಯಲ್ಲಿ 47.60 ರ ಸರಾಸರಿಯಲ್ಲಿ ಒಟ್ಟು 238 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯಾ ತಂಡ ದಾಖಲೆಯ 7ನೇ ಬಾರಿಗೆ ವಿಶ್ವಕಪ್ ಮುಕುಟ ಧರಿಸುವಲ್ಲಿ ಇವರ ಕೊಡುಗೆ ಅಪಾರವಾಗಿತ್ತು.
ಮೂನಿ ಮಗದೊಮ್ಮೆ ನಂ. 1
ಫೈನಲ್ ಪಂದ್ಯದಲ್ಲಿ 49 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 64 ರನ್ ಚಚ್ಚಿದ ಬೆತ್ ಮೂನಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಮತ್ತು ‘ಪ್ಲೇಯರ್ ಆಫ್ ದಿ ಸಿರೀಸ್’ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೂನಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುತ್ತಿರುವುದು ಇದು 5ನೇ ಬಾರಿಯಾಗಿದ್ದು, ಅವರಿಗಿಂತ ಹೆಚ್ಚು ಕಾಲ ನಂ.1 ಸ್ಥಾನದಲ್ಲಿದ್ದ ದಾಖಲೆ ಕೇವಲ ಕ್ಯಾರೆನ್ ರೋಲ್ಟನ್ ಹೆಸರಿನಲ್ಲಿದೆ.
ಬೆತ್ ಮೂನಿ (785 ರೇಟಿಂಗ್) ಒಂದು ಸ್ಥಾನದ ಜಿಗಿತ ಕಂಡು ತಮ್ಮದೇ ದೇಶದ ಜಾರ್ಜಿಯಾ ವೋಲ್ (779 ರೇಟಿಂಗ್) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ವೋಲ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ (771 ರೇಟಿಂಗ್) ಮೂರನೇ ಸ್ಥಾನಕ್ಕೆ, ಹ್ಯಾಲಿ ಮ್ಯಾಥ್ಯೂಸ್ (754) ನಾಲ್ಕನೇ ಸ್ಥಾನಕ್ಕೆ ಹಾಗೂ ಭಾರತದ ಸ್ಮೃತಿ ಮಂಧಾನ (746) ಐದನೇ ಸ್ಥಾನದಲ್ಲಿದ್ದಾರೆ.
ಗಮನಾರ್ಹ ಪ್ರಗತಿ ಸಾಧಿಸಿದ ಆಟಗಾರ್ತಿಯರು
ತಾಜ್ಮಿನ್ ಬ್ರಿಟ್ಸ್ (ದಕ್ಷಿಣ ಆಫ್ರಿಕಾ) : 3 ಸ್ಥಾನಗಳ ಏರಿಕೆ ಕಂಡು 11ನೇ ಸ್ಥಾನಕ್ಕೆ ತಲುಪಿದ್ದಾರೆ.
ನ್ಯಾಟ್ ಸೈವರ್-ಬ್ರಂಟ್ (ಇಂಗ್ಲೆಂಡ್ ನಾಯಕಿ): ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ (ಫೈನಲ್‌ನಲ್ಲಿ ಅಜೇಯ 58 ರನ್ ಮತ್ತು ಸೆಮಿಫೈನಲ್‌ನಲ್ಲಿ 75 ರನ್) ನೀಡಿ 5 ಸ್ಥಾನಗಳ ಬಡ್ತಿಯೊಂದಿಗೆ 16ನೇ ರ‍್ಯಾಂಕಿಂಗ್‌ಗೆ ಏರಿದ್ದಾರೆ.
ಬೌಲಿಂಗ್‌ನಲ್ಲಿ ಭಾರತದ ಶ್ರೀ ಚರಣಿ ದರ್ಬಾರ್
ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಕೇವಲ 5 ಪಂದ್ಯಗಳಿಂದ ಗರಿಷ್ಠ 14 ವಿಕೆಟ್ ಕಬಳಿಸಿ ಮಿಂಚಿದ್ದ ಭಾರತದ ಸ್ಪಿನ್ನರ್ ಶ್ರೀ ಚರಣಿ, ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ನಂ.1 ಸ್ಥಾನವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದ್ದಾರೆ.
ರನ್ನರ್ ಅಪ್ ಆದ ಹೊರಾಗಿಯೂ ಇಂಗ್ಲೆಂಡ್ ತಂಡ ಬೌಲಿಂಗ್ ಶ್ರೇಯಾಂಕದಲ್ಲಿ ಮೇಲುಗೈ ಸಾಧಿಸಿದೆ. ಸೋಫಿ ಎಕ್ಲಿಸ್ಟೋನ್ (723 ರೇಟಿಂಗ್) ಚಾರ್ಲಿ ಡೀನ್ (722 ರೇಟಿಂಗ್) ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಡೀನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಲಾರೆನ್ ಬೆಲ್ 5ನೇ ಸ್ಥಾನದಲ್ಲಿದ್ದರೆ, ಲಿನ್ಸಿ ಸ್ಮಿತ್ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಆಲ್‌ರೌಂಡರ್ ಮತ್ತು ಇತರ ರ‍್ಯಾಂಕಿಂಗ್ಸ್
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರಿಜಾನೆ ಕಾಪ್ 4 ಸ್ಥಾನಗಳ ಏರಿಕೆಯೊಂದಿಗೆ ಟಾಪ್-10 (10ನೇ ಸ್ಥಾನ) ತಲುಪಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಕಿಮ್ ಗಾರ್ತ್ ಭರ್ಜರಿ ಪ್ರದರ್ಶನದ ನೆರವಿನಿಂದ 15ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಇಂಗ್ಲೆಂಡ್‌ನ ಯುವ ಆಟಗಾರ್ತಿ ಫ್ರೇಯಾ ಕೆಂಪ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಬ್ಬರಿಸಿ ಆಲ್‌ರೌಂಡರ್ ಪಟ್ಟಿಯಲ್ಲಿ ಬರೋಬ್ಬರಿ 31 ಸ್ಥಾನಗಳ ಜಿಗಿತ ಕಂಡು 27ನೇ ರ‍್ಯಾಂಕ್ ತಲುಪಿದ್ದಾರೆ.
ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರನ್ನು ಹಿಂದಿಕ್ಕಿ ಆಲ್‌ರೌಂಡರ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.



