ನವದೆಹಲಿ : ಝಿಂಬಾಬ್ವೆ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಗೆ ಪ್ರಕಟಿಸಲಾದ 15 ಸದಸ್ಯರ ಭಾರತ ತಂಡದಲ್ಲಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಹೆಸರಿಲ್ಲದಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸಂಜು ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಅಭಿಮಾನಿಗಳು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ, ಈ ವಿವಾದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗ ತೆರೆ ಎಳೆದಿದ್ದು, ಇದು “ಡ್ರಾಪ್” ಅಲ್ಲ, ಬದಲಿಗೆ “ವಿಶ್ರಾಂತಿ” ಎಂದು ಸ್ಪಷ್ಟನೆ ನೀಡಿದೆ.
ಈ ಕುರಿತು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, “ಸಂಜು ಸ್ಯಾಮ್ಸನ್‌ಗೆ ಝಿಂಬಾಬ್ವೆ ಸರಣಿಯಲ್ಲಿ ವಿಶ್ರಾಂತಿ ನೀಡಿರುವುದರಲ್ಲಿ ಆಶ್ಚರ್ಯ ಪಡಲು ಏನೂ ಇಲ್ಲ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಭಾರತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ ಎಂಬುದು ಟೀಕಿಸುವವರಿಗೆ ತಿಳಿದಿರಬೇಕು,” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
2026ರ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ‘ಪ್ಲೇಯರ್ ಆಫ್ ದಿ ಟ್ೂರ್ನಮೆಂಟ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಂಜು ಅವರನ್ನು ಸದ್ಯದ ಸರಣಿಯಿಂದ ಹೊರಗಿಡಲು ಆಯ್ಕೆ ಸಮಿತಿ ಕೆಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ಆ ಕಾರಣಗಳು ಇಲ್ಲಿವೆ:
ಕಾರ್ಯಭಾರ ನಿರ್ವಹಣೆ
ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಭಾರತೀಯ ಬಲಿಷ್ಠ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಸದಸ್ಯರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸುದೀರ್ಘ ಸರಣಿಯ ಬೆನ್ನಲ್ಲೇ ಸತತ ಪ್ರಯಾಣ ಮತ್ತು ಪಂದ್ಯಗಳ ಒತ್ತಡವನ್ನು ಕಡಿಮೆ ಮಾಡಲು ಆಯ್ಕೆಗಾರರು ಅವರಿಗೆ ಈ ಹೊತ್ತಿನಲ್ಲಿ ಬ್ರೇಕ್ ನೀಡಲು ನಿರ್ಧರಿಸಿದ್ದಾರೆ.
ಯುವ ಪ್ರತಿಭೆಗಳಿಗೆ ವೇದಿಕೆ
ಝಿಂಬಾಬ್ವೆ ಪ್ರವಾಸದಂತಹ ಸಣ್ಣ ಸರಣಿಗಳನ್ನು ಬಿಸಿಸಿಐ ಯುವ ಆಟಗಾರರ ಪರೀಕ್ಷಾ ಕಣವಾಗಿ ಬಳಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಅತಿ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಐಪಿಎಲ್‌ನಲ್ಲಿ ಮಿಂಚಿದ ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) ಹಾಗೂ ಹರ್ಷ್ ದುಬೆ ಅವರಂತಹ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುಕ್ತವಾಗಿ ಆಡಲು ಅವಕಾಶ ಕಲ್ಪಿಸುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ.
ಬೆಂಚ್ ಕಾಯಿಸುವುದನ್ನು ತಪ್ಪಿಸುವ ತಂತ್ರ
ಸದ್ಯ ಭಾರತದ ಟಿ20 ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಯುವ ಆಟಗಾರರ ಪೈಪೋಟಿ ಜೋರಾಗಿದೆ. ಒಂದು ವೇಳೆ ಸಂಜು ಝಿಂಬಾಬ್ವೆಗೆ ಪ್ರಯಾಣ ಬೆಳೆಸಿದ್ದರೂ, ಅವರು ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿತ್ತು. ಸಂಜು ಸ್ಯಾಮ್ಸನ್ ಅವರಂತಹ ಸೀನಿಯರ್ ಆಟಗಾರನನ್ನು ಪ್ರವಾಸಕ್ಕೆ ಕರೆದೊಯ್ದು ಕೇವಲ ಬೆಂಚ್ ಮೇಲೆ ಕೂರಿಸುವುದು ಸೂಕ್ತವಲ್ಲ ಎಂದು ಆಯ್ಕೆ ಸಮಿತಿ ಭಾವಿಸಿದೆ.
ಫಾರ್ಮ್ ಏರಿಳಿತ ಮತ್ತು ದೇಶೀಯ ಕ್ರಿಕೆಟ್ ಸವಾಲು
ವಿಶ್ವಕಪ್ ಹೀರೋ ಆಗಿದ್ದರೂ, ಇತ್ತೀಚಿನ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ಆಡಿದ ಕೊನೆಯ 3 ಪಂದ್ಯಗಳಲ್ಲಿ ಅವರು ಕಲೆಹಾಕಿದ್ದು ಕೇವಲ 5, 0, 1 ರನ್ ಮಾತ್ರ. ಹೀಗಾಗಿ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅವರ ಬದಲಿಗೆ ಸೂರ್ಯವಂಶಿ ಅವರಿಗೆ ಆರಂಭಿಕನಾಗಿ ಅವಕಾಶ ನೀಡಲಾಗಿತ್ತು. ಮುಂಬರುವ ಏಷ್ಯನ್ ಗೇಮ್ಸ್‌ಗೂ ಮುನ್ನ ಸಂಜು ಈ ಕಳಪೆ ಫಾರ್ಮ್ನಿಂದ ಹೊರಬರಬೇಕಿದೆ. ಅದಕ್ಕಾಗಿ ಅವರು ದೇಶೀಯ ಕ್ರಿಕೆಟ್ನಲ್ಲಿ ಆಡಿ ಮತ್ತೆ ಫಾರ್ಮ್ ಕಂಡುಕೊಳ್ಳುವುದು ಸೂಕ್ತ ಎಂದು ಆಯ್ಕೆ ಸಮಿತಿ ನಿರ್ಧರಿಸಿದೆ.
ಹೀಗಾಗಿ, ಸಂಜು ಸ್ಯಾಮ್ಸನ್ ಸದ್ಯ ತಂಡದಿಂದ ಹೊರಗುಳಿದಿದ್ದರೂ, ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಝಿಂಬಾಬ್ವೆ ಸರಣಿಗೆ ಭಾರತ ಟಿ20 ತಂಡ ಹೀಗಿದೆ
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.



