ವರದಿ: ವಿನಯ್ ದೊಡ್ಡಕೊಪ್ಪಲು
ಕೃಷ್ಣರಾಜನಗರ : ಹಲವು ಜಾತಿ ಜನಾಂಗಗಳಿರುವ ಸಮಾಜದಲ್ಲಿ ಜನ್ಮ ತಾಳಿರುವ ನಾವು ಒಂದು ಸಮುದಾಯದ ಮೂಲಕ ಗುರುತಿಸಿಕೊಳ್ಳುತ್ತೇವೆ ಅಷ್ಟೇ. ಹೀಗಾಗಿ ಸಮುದಾಯ ಭವನಗಳು ಎಲ್ಲಾ ಸಮುದಾಯದ ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗುವಂತಿರಬೇಕು ಎಂದು ಮಾಜಿ ಸಚಿವ ಸಾರಾ ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಚಂದಗಾಲು ಗ್ರಾಮದ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಯಾವುದೋ ಒಂದು ಸಮುದಾಯದಲ್ಲಿ ಜನಿಸಿ , ಗುರುತಿಸಿಕೊಳ್ಳುತ್ತೇವೆ ಅಷ್ಟೇ. ಸಮಾಜದ ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯದ ಜನರು ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಒಕ್ಕಲುತನ ಎಂದರೆ ಬಿತ್ತನೆ ಮಾಡಿದ ಪಸಲು ಕೈಗೆ ಬಂದಾಗ ಅದರ ರಾಶಿ ಪೂಜೆ ಮಾಡಿ ಎಲ್ಲಾ ಸಮುದಾಯದವರಿಗೆ ನೀಡಿದ ಬಳಿಕ ಉಳಿದದ್ದನ್ನು ಮನೆಗೆ ತೆಗೆದುಕೊಂಡು ಹೋಗುವುದು ಅಂದರೆ ಹಂಚಿ, ಬದುಕುವುದೇ ಒಕ್ಕಲುತನ ಎಂದ ಅವರು ನಾನು 40 ವರ್ಷದ ಹಿಂದೆ ಓದುತ್ತಿದ್ದ ಸಂದರ್ಭದಲ್ಲಿ ಚಂದಗಾಲಿಗೆ ಬಂದಿದೆ. ಆನಂತರ 2004ರಲ್ಲಿ ಚಂದಗಾಲು ಗ್ರಾಮದ ಜನರು ಹಾಗೂ ತಾಲೂಕಿನ ಜನರು ಸೇರಿ ಕೊಟ್ಟ ದಾನದ ಹಣದಿಂದ ಕೆ ಆರ್ ನಗರದಲ್ಲಿ ಒಂದು ಸೈಟ್ ಕೊಂಡು ಅದರಲ್ಲಿ ಒಂದು ಕಟ್ಟಡ ನಿರ್ಮಿಸಿ ಕಚೇರಿಯನ್ನಾಗಿ ಮಾಡಿದ್ದೆ, ಇಂದಿಗೂ ಅದು ದಾನಿಗಳು ಕೊಟ್ಟ ಹಣದಿಂದ ನಿರ್ಮಿಸಿದ್ದು ಎಂಬ ಸ್ಮರಣೆ ನನಗಿದೆ ಎಂದು ಚಂದಗಾಲು ಗ್ರಾಮದ ಜನರ ಉಪಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕೆಆರ್ ನಗರದ ದೇವೇಗೌಡ ಸಮುದಾಯ ಭಾವನೆಗೆ ಹೆಸರಿಡುವ ಸಂದರ್ಭದಲ್ಲಿನ ಗೊಂದಲಗಳನ್ನು ನೆನಪಿಸಿಕೊಂಡ ಅವರು ಮೈಸೂರಿನ ಸರ್ಕಾರಿ ಜಾಗದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟಿದ್ದಾರೆ ಆದರೆ ಸಮುದಾಯದ ಆಸ್ತಿಯಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ದೇವೇಗೌಡರ ಹೆಸರನ್ನು ಇಡುವ ಸಂದರ್ಭದಲ್ಲಿ ಕೆಲವೊಂದು ಬೇಸರಗಳು ಬಂದ ಸಂದರ್ಭದಲ್ಲಿ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು ಎಂದ ಅವರು ಈಗ ಅದೇ ಸಮುದಾಯ ಭವನದ ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ನೀಡಿದ್ದೇನೆ ಕಟ್ಟಡದ ಸಾಲ ಮುಗಿದ ನಂತರ ಸಮುದಾಯ ಭವನದಿಂದ ಬರುವ ಆದಾಯದಿಂದ ಕೇವಲ ಒಂದು ಸಮುದಾಯಕ್ಕೆ ಮೀಸಲಾಗದೆ ವಿಶಾಲ ಮನಸ್ಸಿನಿಂದ ಎಲ್ಲಾ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನು ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು ಎಂದು ಸಂಘದ ಸದಸ್ಯರಿಗೆ ಸೂಚನೆ ನೀಡಿದರು.
ಚಂದಗಾಲು ಗ್ರಾಮದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ನಾನು ವೈಯಕ್ತಿಕವಾಗಿ ಹಾಗೂ ಕುಮಾರಣ್ಣ ಮತ್ತು ಇತರರಿಂದ ಅನುದಾನ ಕೊಡಿಸುತ್ತೇನೆ ನಿಮ್ಮ ಕೈಲಾದಷ್ಟು ಮಾಡಿ ಕಟ್ಟಡವನ್ನು ಪೂರ್ಣ ಮಾಡುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ ಅವರು ಈಗಾಗಲೇ ವೀರಶೈವ ಸಮುದಾಯದವರಿಗೂ ಕೂಡ 20 ಲಕ್ಷ ಅನುದಾನವನ್ನು ಕೊಡಿಸಲಾಗಿದ್ದು, ಸಮಾಜದ ಪ್ರತಿ ಸಮುದಾಯಕ್ಕೂ ಕೈಲಾದಷ್ಟು ಸಹಾಯ ನೀಡಲು ಪ್ರಯತ್ನಿಸುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿಯುಳ್ಳ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ನವನಗರ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆಎನ್ ಬಸಂತ್ ಅವರು ಮಾತನಾಡುತ್ತಾ ಬಹಳ ಹಿಂದಿನಿಂದಲೂ ಚಂದಗಾಲು ಗ್ರಾಮದ ಗ್ರಾಮಸ್ಥರು ನಡೆಸುವ ನ್ಯಾಯ ಬಹಳ ಕಟ್ಟುನಿಟ್ಟಾಗಿರುತ್ತದೆ ಎಂಬ ಹಿನ್ನೆಲೆ ಇದೆ. ಕೆ ಆರ್ ನಗರಕ್ಕೆ ಚಂದಗಾಲು ಗ್ರಾಮದ ಗ್ರಾಮಸ್ಥರ ಪ್ರಭಾವ ಹೆಚ್ಚಿದ್ದು, ಸರ್ಕಾರಿ ಆಸ್ಪತ್ರೆಗೆ ಈ ಊರಿನ ಕೊಡುಗೆ ಅತಿ ಹೆಚ್ಚು ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿಯ ನಿವೃತ್ತ ಸಹಾಯಕ ನಿರ್ದೇಶಕ ಸಿ ಎಸ್ ಸುದರ್ಶನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ನಿವೃತ್ತ ಉಪ ನಿರ್ದೇಶಕ ಸಿ ಎಸ್ ರಾಮಲಿಂಗ, ನವನಗರ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ಸಿ ಸುರೇಶ್, ತಾಲೂಕು, ಜೆಡಿಎಸ್ ವಕ್ತಾರ ಕೆಎಲ್ ರಮೇಶ್, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಅಧ್ಯಕ್ಷೇ ರಾಜಲಕ್ಷ್ಮಿ, ಪುರಸಭೆ ಮಾಜಿ ಸದಸ್ಯ ಜಗದೀಶ್ ಕೆ ಎಲ್, ಗ್ರಾಮ ಅಭಿವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್, ಮಂಜು , ಸಿಟಿ ರಾಮಚಂದ್ರಪ್ಪ, ಸಿಜೆ ಗೌಡಪ್ಪ ಹಾಗೂ ಎಂಟು ಸಮುದಾಯಗಳ ಮುಖಂಡರು ಗ್ರಾಮಸ್ಥರು ಹಾಜರಿದ್ದರು.



