ಮೈಸೂರು: ಖ್ಯಾತ ಲೇಖಕಿ ಸಿ.ಎನ್.ಮುಕ್ತಾ (ಕಳ್ಳಂಬೆಳ್ಳ ನರಸಿಂಹ ಮೂರ್ತಿ ಮುಕ್ತಾ) ಶುಕ್ರವಾರ ಬೆಳಗಿನ ಜಾವ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರಿಗೆ ಸೋದರ, ಸೋದರಿ ಇದ್ದಾರೆ. ಲೇಖಕರಾಗಿದ್ದ ನವರತ್ನರಾಮ್ ರಾವ್ ಅವರು ಇವರ ಚಿಕ್ಕಪ್ಪ. ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ 25 ವರ್ಷಕ್ಕೂ ಅಧಿಕವಾಗಿ ವಿವಿಧೆಡೆ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.
ಅವರ ಕಾದಂಬರಿಗಳಲ್ಲಿ ಸುಖದ ಸೋಪಾನ, ಕ್ಷಮಯಾ ಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಅಮೃತಮಯಿ, ವಿಮುಕ್ತಿ ಪ್ರಸಿದ್ಧವಾದವು. ಅವರ ಕಾದಂಬರಿಗಳು ರಾಜ್ಯದ ಪ್ರಮುಖ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಅಲ್ಲದೆ 75ಕ್ಕೂ ಅಧಿಕ ಕಾದಂಬರಿ, 15ಕ್ಕೂ ಅಧಿಕ ಕಥಾಸಂಕಲನಗಳು ಪ್ರಕಟವಾಗಿವೆ. ಅವರ ವಿಮುಕ್ತಿ ಕಾದಂಬರಿ ಆಧರಿಸಿ ರಾಜೇಂದ್ರಸಿಂಗ್ ಬಾಬು ಅವರು ದೋಣಿ ಸಾಗಲಿ ಸಿನಿಮಾ ನಿರ್ದೇಶಿಸಿದ್ದರು. ಅಲ್ಲದೆ ಮೇಘ ಮಂದಾರ ಕಾದಂಬರಿ ಆಧರಿಸಿ ಕೋಡ್ಲು ರಾಮಕೃಷ್ಣ ಅವರು ಮಿಸ್ ಕ್ಯಾಲಿಫೋರ್ನಿಯಾ ಸಿನಿಮಾ ನಿರ್ದೇಶಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.



