Thursday, July 9, 2026
Google search engine

Homeಸ್ಥಳೀಯಶ್ರಮದಾನ ಮೂಲಕ ಪ್ಲಾಸ್ಟಿಕ್ ಮುಕ್ತ ಚಾಮುಂಡಿಬೆಟ್ಟಕ್ಕೆ ಜಾಗೃತಿ

ಶ್ರಮದಾನ ಮೂಲಕ ಪ್ಲಾಸ್ಟಿಕ್ ಮುಕ್ತ ಚಾಮುಂಡಿಬೆಟ್ಟಕ್ಕೆ ಜಾಗೃತಿ

ಮೈಸೂರು : ಆಷಾಢ ಮಾಸದ ಹಿನ್ನೆಲೆ ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಜಾಗೃತಿ ಮೂಡಿಸುವ ಸಲುವಾಗಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಅವರ ನೇತೃತ್ವದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಹಾಗೂ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಗುರುವಾರ ಮುಂಜಾನೆ ಬೆಟ್ಟದ ಪಾದದಿಂದ ದೇವಾಲಯದವರೆಗೂ ಮೆಟ್ಟಿಲುಗಳನ್ನು ಗುಡಿಸಿ, ಮುಳ್ಳಿನ ಗಿಡ ತೆರವುಗೊಳಿಸಿ, ಮಾರ್ಗ ಮಧ್ಯೆದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಪೇಪರ್, ನೀರಿನ ಬಾಟಲ್ ಸೇರಿದಂತೆ ಇನ್ನಿತರ ಪರಿಸರಕ್ಕೆ ಹಾನಿಕಾರಕವಾದ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಅವರು ಮಾತನಾಡಿ, ಆಷಾಢ ಮಾಸದ ದಿನಗಳಂದು ವಾಡಿಕೆಯಂತೆ ಸಾವಿರಾರು ಭಕ್ತರು ಮೆಟ್ಟಿಲುಗಳನ್ನು ಹತ್ತಿ ದೇವಿಯ ದರ್ಶನ ಪಡೆಯುತ್ತಾರೆ. ಈ ಹಿನ್ನೆಲೆ ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ವಸ್ತುಗಳಿಂದ ಬೆಟ್ಟವನ್ನು ಮುಕ್ತಗೊಳಿಸಬೇಕು ಎಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಎಲ್ಲಾ ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರು, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಜೊತೆಗೂಡಿ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು.

ಚಾಮುಂಡಿ ಬೆಟ್ಟ ಗ್ರಾ.ಪಂ. ಪಿಡಿಒ ಕೆ.ರುಕ್ಮಾಂಗದ ಅವರು ಮಾತನಾಡಿ, ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ ಬೆಟ್ಟದ ಆಸ್ಮಿತೆ ಹಾಗೂ ಪ್ರಕೃತಿ ಸೌಂದರ್ಯವನ್ನು ಸಂರಕ್ಷಿಸಲು ನಾಗರಿಕರು ಕೈಜೋಡಿಸಬೇಕು. ದೇವಿಯ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರೂ ಪ್ಲಾಸ್ಟಿಕ್ ವಸ್ತುಗಳನ್ನು ತಂದು ಇಲ್ಲಿ ಬೀಸಾಡಬಾರದು ಎಂದು ಮನವಿ ಮಾಡಿದರು.

ಎಸ್ಐಆರ್ ಜಾಗೃತಿ ಜಾಥಾ

ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಚಾಮುಂಡಿಬೆಟ್ಟದಲ್ಲಿ ಜಾಗೃತಿ ಜಾಥಾ ನಡೆಸಿ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ಅವರು ಮಾತನಾಡಿ, ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಬಿಎಲ್ಒ ಹಾಗೂ ಸಿಬ್ಬಂದಿ ಮನೆಗೆ ಹತ್ತಿರ ಬಂದಾಗ ಅವರಿಗೆ ಸಹಕರಿಸಬೇಕು. ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಸಹಾಯ ಮತ್ತು ಸೌಲಭ್ಯ ಕೇಂದ್ರ ತೆರೆಯಲಾಗಿದ್ದು, ಮಾಹಿತಿ, ಅರ್ಜಿ ನಮೂನೆ ಇತರ ಸೌಲಭ್ಯಕ್ಕೆ ಭೇಟಿ ನೀಡಬಹುದು. ನಮ್ಮ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಾಮುಂಡಿಬೆಟ್ಟ ಗ್ರಾ.ಪಂ. ಆಡಳಿತಾಧಿಕಾರಿ ವೈ.ಎನ್.ಮಮತಾ ಅವರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್ಡಿಎಎ, ಡಿಇಒ ಗಳು, ಪೌರಕಾರ್ಮಿಕ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular