ಬೆಂಗಳೂರು : ಅರಣ್ಯೇತರ ಉದ್ದೇಶಕ್ಕೆ ಕಾನೂನುಬದ್ಧವಾಗಿ ಭೂಪರಿವರ್ತನೆ ಆಗದ ಎಚ್‌ಎಂಟಿ ಭೂಮಿ ಅರಣ್ಯವಾಗಿಯೇ ಉಳಿಯಲಿದ್ದು, ಅದರ ಮೇಲೆ ರಾಜ್ಯ ಸರ್ಕಾರಕ್ಕೇ ಹಕ್ಕಿದೆ ಹೊರತು ಎಚ್‌ಎಂಟಿಗೆ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ಸ್ಪಷ್ಟಪಡಿಸಿದರು.
ಈ ಬಗ್ಗೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಂಟಿ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆದು ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್‌ಗಿಂತ ದೊಡ್ಡ ಉದ್ಯಾನ ನಿರ್ಮಿಸಿ ಉತ್ತರ ಬೆಂಗಳೂರಿಗೆ ಶ್ವಾಸತಾಣವಾಗಿ ಉಳಿಸುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.
ಇನ್ನೂ ಎಚ್‌ಎಂಟಿ ಭೂಮಿ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಅದರ ಮೇಲೆ ಸರ್ಕಾರಕ್ಕೆ ಹಕ್ಕಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿರುವುದು ಸರಿಯಲ್ಲ. ಈ ಕುರಿತು ತೀರ್ಪು ನೀಡಬೇಕಿರುವುದು ನ್ಯಾಯಾಲಯವೇ ಹೊರತು ರಾಜಕಾರಣಿಗಳಲ್ಲ ಎಂದು ಖಂಡ್ರೆ ಹೇಳಿದರು. ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಲ್ಲಿ ಒಮ್ಮೆ ಅರಣ್ಯ ಎಂದು ಘೋಷಿತವಾದ ಭೂಮಿಯನ್ನು ಕಾನೂನುಬದ್ಧವಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತಿಸದಿದ್ದರೆ ಅದು ಅರಣ್ಯವಾಗಿಯೇ ಉಳಿಯುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಪರಿಸರದ ಹಕ್ಕುಗಳು ಭೂ ಮಾಲೀಕತ್ವದ ಹಕ್ಕಿಗಿಂತ ಮೇಲು ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ ಎಂದು ತಿಳಿಸಿದರು. ಬೆಂಗಳೂರು ನಗರ ಡಿಸಿಎಫ್ ನೀಡಿರುವುದು ಸಾಮಾನ್ಯ ನೋಟಿಸ್ ಅಲ್ಲ, ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 64ಎ ಅಡಿ ಅರೆ-ನ್ಯಾಯಿಕ ಪ್ರಾಧಿಕಾರ ನೀಡಿರುವ ಆದೇಶವಾಗಿದೆ. ಎಚ್‌ಎಂಟಿಗೆ ದಾಖಲೆ ಸಲ್ಲಿಸಲು ಅವಕಾಶ ನೀಡಿದ ಬಳಿಕ ಸಮರ್ಪಕ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ. ಆ ಆದೇಶದ ವಿರುದ್ಧ ಕಾನೂನುಬದ್ಧವಾಗಿ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.
1901ರಿಂದ 1969ರವರೆಗೆ ಮೀಸಲು ಅರಣ್ಯವನ್ನು ಡೀಫಾರೆಸ್ಟ್ ಮಾಡಲು ಅಧಿಸೂಚನೆ ಕಡ್ಡಾಯವಾಗಿತ್ತು. ಅಂತಹ ಅಧಿಸೂಚನೆ ಇದ್ದರೆ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದ ಅವರು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಇದೇ ಅವಧಿಯಲ್ಲಿ ನೀಡಿದ ಅರಣ್ಯ ಭೂಮಿಗೆ ಸಂಬಂಧಿಸಿದ ಅಧಿಸೂಚನೆಯ ದಾಖಲೆಗಳನ್ನು ಪ್ರದರ್ಶಿಸಿದರು.
2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಎಚ್‌ಎಂಟಿ ಭೂಮಿ ಮಾರಾಟಕ್ಕೆ ಕೇಂದ್ರದ ಅನುಮತಿ ಕೋರಿ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಅದಕ್ಕೆ ಕೇಂದ್ರ ಅರಣ್ಯ ಸಚಿವಾಲಯ, ಅರಣ್ಯ ಸಂರಕ್ಷಣಾ ಕಾಯ್ದೆ-1980 ಅನ್ವಯಿಸುವ ಕಾರಣ ಎನ್‌ಒಸಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಎಚ್‌ಎಂಟಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಭೂಮಿಯನ್ನು ಮೂಲ ಉದ್ದೇಶಕ್ಕೆ ಬಳಸದೆ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಖಂಡ್ರೆ, ಭೂಮಿಯನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಹಾಕಿರುವ ಎಚ್‌ಎಂಟಿ ಪ್ರದೇಶಕ್ಕೆ ಭೇಟಿ ನೀಡುವ ಸವಾಲನ್ನು ಸ್ವೀಕರಿಸುವುದಾಗಿ ತಿಳಿಸಿದ ಅವರು, ಈ ಹಿಂದೆ ಅಧಿಕಾರಿಗಳೇ ಹೂಗುಚ್ಛ ನೀಡಿ ಸ್ವಾಗತಿಸಿದ್ದ ಫೋಟೋ ಪ್ರದರ್ಶಿಸಿ, ಅದನ್ನು ಅತಿಕ್ರಮ ಪ್ರವೇಶ ಎನ್ನುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಎಚ್‌ಎಂಟಿ ಪ್ರದೇಶದಲ್ಲಿರುವ ಹಸಿರು ಹೊದಿಕೆಯ ಉಪಗ್ರಹ ಚಿತ್ರಗಳು ಮತ್ತು ವಿಡಿಯೊಗಳನ್ನೂ ಬಿಡುಗಡೆ ಮಾಡಿದರು.
ಇದೇ ವೇಳೆ ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಉಕ್ಕು ಸಚಿವರಾಗಿ ಕುಮಾರಸ್ವಾಮಿ ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದ ಖಂಡ್ರೆ, ಬಳ್ಳಾರಿ ಜಿಲ್ಲೆಯ ವೇಣಿವೀರಾಪುರದಲ್ಲಿ ಎನ್‌ಎಂಡಿಸಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಭೂಮಿ ಪಡೆದಿದ್ದರೂ ಹತ್ತು ವರ್ಷ ಕಳೆದರೂ ಯೋಜನೆ ಆರಂಭವಾಗಿಲ್ಲ. ಇದರಿಂದ ಸಾವಿರಾರು ಉದ್ಯೋಗಗಳು ಕಳೆದುಹೋಗಿದ್ದು, ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ಜಲ, ನೆಲ ಮತ್ತು ಅರಣ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವರೂ ಅರಿತುಕೊಳ್ಳಬೇಕು. ಬಿಡದಿಯ ಪರಿಸರದ ಬಗ್ಗೆ ತೋರಿಸುವ ಕಾಳಜಿಯನ್ನೇ ಎಚ್‌ಎಂಟಿ ಹಾಗೂ ದೇವದಾರಿ ಅರಣ್ಯ ಪ್ರದೇಶಗಳ ಸಂರಕ್ಷಣೆಯಲ್ಲೂ ತೋರಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.



