Saturday, July 11, 2026
Google search engine

Homeರಾಜಕೀಯಬಿಜೆಪಿ–ಜೆಡಿಎಸ್ ಮೈತ್ರಿಗೆ ಹೊಸ ಬಲ : ಸಮನ್ವಯ ಸಮಿತಿ ರಚನೆ, ಉಪಚುನಾವಣೆಗೂ ಜಂಟಿ ಕಾರ್ಯತಂತ್ರ

ಬಿಜೆಪಿ–ಜೆಡಿಎಸ್ ಮೈತ್ರಿಗೆ ಹೊಸ ಬಲ : ಸಮನ್ವಯ ಸಮಿತಿ ರಚನೆ, ಉಪಚುನಾವಣೆಗೂ ಜಂಟಿ ಕಾರ್ಯತಂತ್ರ

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಹಾಗೂ ಮುಂಬರುವ ಉಪಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸುವ ಉದ್ದೇಶದಿಂದ ಬಿಜೆಪಿ–ಜೆಡಿಎಸ್ ಮೈತ್ರಿ ಪಕ್ಷಗಳು ಮಹತ್ವದ ನಿರ್ಧಾರ ಕೈಗೊಂಡಿವೆ.

ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಭಯ ಪಕ್ಷಗಳ ನಡುವೆ ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಲಾಗಿದ್ದು, ಮೈತ್ರಿಯನ್ನು ಸಾಂಸ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ರಚಿಸಲಾಗುತ್ತಿರುವ ಈ ಸಮಿತಿಯು ಎರಡೂ ಪಕ್ಷಗಳ ನಡುವಿನ ಸಮನ್ವಯ, ಸಂವಹನ ಹಾಗೂ ರಾಜಕೀಯ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಅಲ್ಲದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜಂಟಿಯಾಗಿ ಹೋರಾಟ ನಡೆಸಲು ಸಭೆಯಲ್ಲಿ ನಾಯಕರು ಒಮ್ಮತ ವ್ಯಕ್ತಪಡಿಸಿದ್ದಾರೆ. ಇನ್ನೂ ಹಿರಿಯೂರು ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲೂ ಚರ್ಚೆ ನಡೆದಿದ್ದು, ಜೆಡಿಎಸ್ ಸ್ಪರ್ಧಿಸುವ ಆಸಕ್ತಿ ವ್ಯಕ್ತಪಡಿಸಿದ್ದರೆ, ಬಿಜೆಪಿ ತನ್ನ ಹಿಂದಿನ ಗೆಲುವಿನ ಆಧಾರದ ಮೇಲೆ ಹಕ್ಕು ಮಂಡಿಸಿದೆ.

ಜೊತೆಗೆ ಮುಂಬರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಪೈಕಿ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ನೀಡುವಂತೆ ಬಿಜೆಪಿ ಮನವಿ ಮಾಡಿದೆ. ಈ ಎಲ್ಲ ವಿಷಯಗಳ ಕುರಿತು ಮುಂದಿನ ದಿನಗಳಲ್ಲಿ ಜಂಟಿ ಸಭೆಗಳ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಲು ಉಭಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದ ಹಿನ್ನೆಲೆಯಲ್ಲಿ ಮೈತ್ರಿಯಲ್ಲಿ ಉಂಟಾಗಿದ್ದ ಗೊಂದಲ ಮರುಕಳಿಸದಂತೆ ನೋಡಿಕೊಳ್ಳಲು ಹಾಗೂ ಭಿನ್ನಾಭಿಪ್ರಾಯಗಳನ್ನು ಆರಂಭದಲ್ಲೇ ಬಗೆಹರಿಸಲು ಸಮನ್ವಯ ಸಮಿತಿ ರಚಿಸಲಾಗುತ್ತಿದ್ದು, ನಿಯಮಿತ ಸಭೆಗಳ ಮೂಲಕ ರಾಜಕೀಯ ಬೆಳವಣಿಗೆಗಳ ಪರಿಶೀಲನೆ ನಡೆಸಿ, ಸರ್ಕಾರದ ವಿರುದ್ಧ ಜಂಟಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.

6 ಸದಸ್ಯರ ಸಮನ್ವಯ ಸಮಿತಿ

ಬಿಜೆಪಿ ಪ್ರತಿನಿಧಿಗಳು : ಬಿ.ವೈ. ವಿಜಯೇಂದ್ರ (ರಾಜ್ಯಾಧ್ಯಕ್ಷ), ಆರ್.ಅಶೋಕ್ (ವಿಧಾನಸಭೆ ವಿರೋಧ ಪಕ್ಷದ ನಾಯಕ), ಪ್ರಹ್ಲಾದ್ ಜೋಶಿ (ಕೇಂದ್ರ ಸಚಿವ)

ಜೆಡಿಎಸ್ ಪ್ರತಿನಿಧಿಗಳು:

ಎಚ್.ಡಿ. ಕುಮಾರಸ್ವಾಮಿ

ಇನ್ನಿಬ್ಬರು ಸದಸ್ಯರ ಹೆಸರನ್ನು ಶೀಘ್ರದಲ್ಲೇ ಘೋಷಿಸಲಾಗುವುದು.

ಮುಂಬರುವ ಉಪಚುನಾವಣೆಗಳು ಹಾಗೂ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸಮನ್ವಯ ಸಮಿತಿ ಪ್ರಮುಖ ಹೆಜ್ಜೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular