ಬೆಂಗಳೂರು : ಐದು ವರ್ಷದ ಮಗುವಿನ ಅಂಗಾಂಗ ದಾನವು ಅಪರೂಪದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 13 ವರ್ಷದ ಲಕ್ಷ್ಮೀ ಪ್ರಿಯಾಗೆ ಹೊಸ ಬದುಕಿನ ಭರವಸೆ ನೀಡಿದೆ. ಜನ್ಮಜಾತ ಪಿತ್ತನಾಳದ ಕಾಯಿಲೆ (ಬಿಲಿಯರಿ ಅಟ್ರೇಶಿಯಾ)ಯಿಂದ ಬಳಲುತ್ತಿದ್ದ ಲಕ್ಷ್ಮೀ ಪ್ರಿಯಾಗೆ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಇದೀಗ ಆರೋಗ್ಯದತ್ತ ಚೇತರಿಸಿಕೊಳ್ಳುತ್ತಿದ್ದಾರೆ.
ಶಿಶುವಾಗಿದ್ದಾಗಲೇ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ 2012ರಲ್ಲಿ ಕಸಾಯಿ ಪೋರ್ಟೋ ಎಂಟೆರೋಸ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೂ, ಕಾಲಕ್ರಮೇಣ ಯಕೃತ್ತಿಗೆ ತೀವ್ರ ಹಾನಿಯಾಗಿದ್ದು, ಕಾಮಾಲೆ, ದೈಹಿಕ ಬೆಳವಣಿಗೆಯ ಕುಂಠಿತ, ಪದೇಪದೇ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಹಾಗೂ ಪೋರ್ಟಲ್ ಹೈಪರ್ಟೆನ್ಷನ್ನಿಂದ ಜೀರ್ಣಾಂಗದಲ್ಲಿ ರಕ್ತಸ್ರಾವವಾಗುವ ಅಪಾಯವನ್ನು ಬಾಲಕಿ ಎದುರಿಸುತ್ತಿದ್ದರು.
ಈ ಸಂದರ್ಭದಲ್ಲಿ ಮೈಸೂರಿನ ಐದು ವರ್ಷದ ಮಗುವಿನ ಯಕೃತ್ತು ಅಂಗಾಂಗ ದಾನದ ಮೂಲಕ ಲಭ್ಯವಾಯಿತು. ಸಕಾಲದಲ್ಲಿ ಅಂಗಾಂಗ ದೊರೆತಿದ್ದರಿಂದ ಹಾಗೂ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು ಎಂದು ಸ್ಪರ್ಶ್ ಆಸ್ಪತ್ರೆಯ ಎಚ್ಪಿಬಿ ಮತ್ತು ಲಿವರ್ ಟ್ರಾನ್ಸ್ಪ್ಲಾಂಟ್ ಸೇವೆಗಳ ಕನ್ಸಲ್ಟೆಂಟ್ ಡಾ.ಗೌತಮ್ ಕುಮಾರ್ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಲಕ್ಷ್ಮೀ ಪ್ರಿಯಾ ಆರೋಗ್ಯಕರ ಜೀವನದತ್ತ ಚೇತರಿಸಿಕೊಳ್ಳುತ್ತಿದ್ದು, ಸಾಮಾನ್ಯ ಜೀವನ ನಡೆಸುವ ನಿರೀಕ್ಷೆ ಮೂಡಿದೆ ಎಂದು ಅವರು ಹೇಳಿದರು.
ಅಂಗಾಂಗ ದಾನವು ಮಾನವೀಯತೆಯ ಅತ್ಯುನ್ನತ ಸೇವೆಯಾಗಿದ್ದು, ಒಂದು ಕುಟುಂಬದ ಅಂಗಾಂಗ ದಾನ ಮತ್ತು ಸಮಾಜದ ಸಹಕಾರ ಮತ್ತೊಂದು ಮಗುವಿನ ಜೀವ ಉಳಿಸಬಹುದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಸ್ಪರ್ಶ್ ಆಸ್ಪತ್ರೆ ಯಶವಂತಪುರ ಘಟಕದ ಸಿಒಒ ಅರ್ನಬ್ ಆದಕ್ ಅಭಿಪ್ರಾಯಪಟ್ಟರು.



