Saturday, July 11, 2026
Google search engine

Homeರಾಜ್ಯಡೀಲ್‌ಗಳು, ಅಪರಾಧಗಳಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಡಿ.ಕೆ.ಶಿವಕುಮಾರ್

ಡೀಲ್‌ಗಳು, ಅಪರಾಧಗಳಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಡಿ.ಕೆ.ಶಿವಕುಮಾರ್

ಬೆಂಗಳೂರು : ಯಾವುದೇ ಪೊಲೀಸ್ ಅಧಿಕಾರಿ ಅಕ್ರಮ ಡೀಲ್‌ಗಳು ಅಥವಾ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಇಂತಹ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.

ವಿಧಾನಸೌಧದ ಆವರಣದಲ್ಲಿ ಶನಿವಾರ ರಾಜ್ಯದ ಜಿಲ್ಲಾ ಪೊಲೀಸ್ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್‌ಗಳು ಹಾಗೂ 75 ಬೊಲೆರೋ ವಾಹನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗಡಿಯಲ್ಲಿ ಸೈನಿಕರು ಮತ್ತು ಗಡಿಯೊಳಗೆ ಪೊಲೀಸರು ದೇಶ ಹಾಗೂ ರಾಜ್ಯದ ಭದ್ರತೆಯ ಬೆನ್ನೆಲುಬಾಗಿದ್ದಾರೆ ಎಂದು ಶ್ಲಾಘಿಸಿದರು. ಕಳೆದ ಒಂದು ವರ್ಷದಲ್ಲಿ ₹375 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 1,500ಕ್ಕೂ ಹೆಚ್ಚು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಡ್ರಗ್ಸ್ ಜಾಲವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಸರ್ಕಾರ ₹10 ಲಕ್ಷ ನಗದು ಬಹುಮಾನ ನೀಡಲು ತೀರ್ಮಾನಿಸಿದೆ ಎಂದು ಘೋಷಿಸಿದರು.

ಇನ್ನೂ ಇತ್ತೀಚೆಗೆ ಕೇರಳದ ಗೃಹ ಸಚಿವರು ಕರ್ನಾಟಕದ ಮೂಲಕ ಮಾದಕ ವಸ್ತುಗಳು ಕೇರಳ ಪ್ರವೇಶಿಸದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಅಪರಾಧಗಳ ಸ್ವರೂಪ ಬದಲಾಗುತ್ತಿದ್ದು, ಅವುಗಳನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯನ್ನು ಮತ್ತಷ್ಟು ತಂತ್ರಜ್ಞಾನಸಜ್ಜುಗೊಳಿಸಲಾಗುತ್ತಿದೆ. ಗೂಂಡಾಗಿರಿ ನಿಯಂತ್ರಣಕ್ಕಾಗಿ ಎಲ್ಲ ಪೊಲೀಸ್ ಠಾಣೆಗಳಲ್ಲೂ ವಿಶೇಷ ತಂಡಗಳನ್ನು ರಚಿಸಲು ಸೂಚನೆ ನೀಡಲಾಗಿದೆ ಎಂದರು.

ಇದೇ ವೇಳೆ ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳ ಹುಂಡಿಗಳನ್ನು ತೆರೆಯುವುದರಿಂದ ಹಿಡಿದು ಹಣ ಎಣಿಕೆ ಮಾಡಿ ಬ್ಯಾಂಕ್‌ಗೆ ಜಮಾ ಮಾಡುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ದಾಖಲಾತಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹಾಗೂ ಇದರಿಂದ ದೇವಾಲಯಗಳಲ್ಲಿ ಕಳ್ಳತನ ಮತ್ತು ಅಕ್ರಮಗಳನ್ನು ತಡೆಯಲು ನೆರವಾಗಲಿದೆ ಎಂದರು.

ನೇಮಕಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಯಾರೊಬ್ಬರೂ ಲಂಚ ನೀಡಿ ಪೊಲೀಸ್ ಇಲಾಖೆಗೆ ಸೇರುವಂತಿಲ್ಲ. ಅರ್ಹತೆಯೇ ನೇಮಕಾತಿಗೆ ಮುಖ್ಯ ಮಾನದಂಡವಾಗಬೇಕು. ಸರ್ಕಾರ ಪೊಲೀಸ್ ಇಲಾಖೆಯೊಂದಿಗೆ ಸದಾ ನಿಲ್ಲಲಿದ್ದು, ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ವಿಶ್ವಾಸ ಉಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

RELATED ARTICLES
- Advertisment -
Google search engine

Most Popular