ಹಾವೇರಿ : ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಪ್ರಮುಖ ನದಿಯಾದ ವರದಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದು, ನದೀತೀರದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ರೈತರು ವರದಾ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಳೆ ಕೊರತೆಯಿಂದ ಸಂಕಷ್ಟದಲ್ಲಿದ್ದ ರೈತರಿಗೆ ನದಿಯಲ್ಲಿ ನೀರು ಹರಿದಿರುವುದು ಕೊಂಚ ನೆಮ್ಮದಿ ತಂದಿದ್ದು, ಈ ಬಾರಿ ಮುಂಗಾರು ಆರಂಭದಿಂದಲೇ ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಸುಮಾರು ಶೇ.50ರಷ್ಟು ಮಳೆಯ ಅಭಾವ ಉಂಟಾಗಿದ್ದು, ಮಳೆಯ ನಿರೀಕ್ಷೆಯಲ್ಲಿರುವ ಅನೇಕ ರೈತರು ಇನ್ನೂ ಭತ್ತದ ನಾಟಿ ಕಾರ್ಯ ಆರಂಭಿಸಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ಕೃಷಿಗೆ ಹೊಸ ಚೈತನ್ಯ ನೀಡಿದ್ದು, ನದಿಯ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಬಾಳಂಬೀಡ ಏತನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
ಇನ್ನೂ ಈ ಯೋಜನೆಯ ಮೂಲಕ ಹಾನಗಲ್ ತಾಲೂಕಿನ ಸುಮಾರು 180 ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ವರದಾ ನದಿಯ ನೀರನ್ನು ಕೆರೆಗಳಿಗೆ ಹರಿಸುವ ಮೂಲಕ ರೈತರ ಜಮೀನುಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಕೃತಿ ಮುನಿಸಿಕೊಂಡಿರುವ ಸಂದರ್ಭದಲ್ಲಿ ನೀರಿನ ಲಭ್ಯತೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ರೈತರ ಬದುಕಿಗೆ ನೆರವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.



