Sunday, July 12, 2026
Google search engine

Homeಸಿನಿಮಾಎಸ್.ಜಾನಕಿ ಹೆಸರು ಅಜರಾಮರವಾಗಿಸಲು ಕ್ರಮ : ಸಿಎಂ ಡಿಕೆಶಿ

ಎಸ್.ಜಾನಕಿ ಹೆಸರು ಅಜರಾಮರವಾಗಿಸಲು ಕ್ರಮ : ಸಿಎಂ ಡಿಕೆಶಿ

ಬೆಂಗಳೂರು : ಖ್ಯಾತ ಗಾಯಕಿ ಎಸ್.ಜಾನಕಿ ಅವರ ಹೆಸರು ಸದಾ ಉಳಿಯುವಂತೆ ಮಾಡಲು ಚಿತ್ರರಂಗದ ಗಣ್ಯರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಗಾನ ಕೋಗಿಲೆ, ಅಪ್ರತಿಮ ಗಾಯಕಿಯಾಗಿದ್ದ ಎಸ್.ಜಾನಕಿ ಅವರು ತಮ್ಮ 50ಕ್ಕೂ ಹೆಚ್ಚು ವರ್ಷಗಳ ಸಂಗೀತ ಪಯಣದಲ್ಲಿ ವಿವಿಧ ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಜಾನಕಿ ಅವರ ನಿಧನದ ಬಳಿಕ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಪಾರ್ಥಿವ ಶರೀರವನ್ನು ಚೆನ್ನೈ ಅಥವಾ ಹೈದರಾಬಾದ್‌ಗೆ ಕೊಂಡೊಯ್ಯಲು ವಿಮಾನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೆ. ಆದರೆ, ಜಾನಕಮ್ಮ ಅವರ ಕೊನೆಯ ಆಸೆಯಂತೆ ಮೈಸೂರಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ಸಿಎಂ ಹೇಳಿದರು.

ಅವರ ಇಚ್ಛೆಯಂತೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅದಕ್ಕೂ ಮುನ್ನ ಮಹಾರಾಜ ಕಾಲೇಜು ಆವರಣದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಎಸ್.ಜಾನಕಿ ಅವರು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ 33ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದರು. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.

ಲತಾ ಮಂಗೇಶ್ಕರ್ ಅವರಂತೆ ಜಾನಕಮ್ಮ ಅವರು ಅತ್ಯಂತ ಸರಳ ಜೀವನ ನಡೆಸಿದವರು. ನಮ್ಮ ನೆಲ, ಭಾಷೆ ಮತ್ತು ಮೈಸೂರಿನ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲೇ ನೆಲೆಸಿದ್ದರು. ಅವರ ಮೊದಲ ಹಾಗೂ ಕೊನೆಯ ಹಾಡಿನ ರೆಕಾರ್ಡಿಂಗ್ ಕೂಡ ಮೈಸೂರಿನಲ್ಲೇ ನಡೆದಿರುವುದು ವಿಶೇಷ ಎಂದು ಡಿ.ಕೆ.ಶಿವಕುಮಾರ್ ನೆನಪಿಸಿಕೊಂಡರು.

ಇನ್ನೂ ಜಾನಕಿ ಅವರ ಸಾಧನೆ ಮತ್ತು ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ಶಾಶ್ವತವಾಗಿಸುವ ಕ್ರಮಗಳ ಕುರಿತು ಚಿತ್ರರಂಗದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ತಾವು ಅನಿವಾರ್ಯ ಕಾರಣಗಳಿಂದ ಮೈಸೂರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸೇರಿದಂತೆ ಇತರ ಗಣ್ಯರು ಸರ್ಕಾರದ ಪರವಾಗಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular