ಬೆಳಗಾವಿ : ಬೆಳಗಾವಿಯ ಆನಗೋಳದ ಸಂತ ಮೀರಾ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದಿದ್ದ ಆರ್ಎಸ್ಎಸ್ನ ರಾಷ್ಟ್ರೀಯ ವಾರ್ಷಿಕ ಸಭೆ ಶನಿವಾರ ಮುಕ್ತಾಯವಾಗಿದೆ. ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ 226 ಪ್ರಚಾರಕರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆ ಕುರಿತು ಚರ್ಚಿಸಿದರು.
ಸಭೆಯಲ್ಲಿ 2026ರ ಶಾಖಾ ವಿಸ್ತರಣೆ, ಪ್ರಶಿಕ್ಷಣ ವರ್ಗಗಳ ಪ್ರಗತಿ, ಸಾಮಾಜಿಕ ಚಟುವಟಿಕೆಗಳ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಆರ್ಎಸ್ಎಸ್ ಪ್ರಚಾರ ವಿಭಾಗದ ಪ್ರಮುಖ ಸುನೀಲ್ ಅಂಬೇಕರ್, ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಮೋಹನ್ ಭಾಗವತ್ ಅವರ ದೇಶವ್ಯಾಪಿ ಪ್ರವಾಸಕ್ಕೂ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದ ದೇಣಿಗೆ ದುರ್ಬಳಕೆ ಆರೋಪಗಳ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆಯಾಗದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಪ್ರಕರಣದ ಸತ್ಯ ಎಸ್ಐಟಿ ಹಾಗೂ ಪೊಲೀಸ್ ತನಿಖೆಯಿಂದ ಹೊರಬರಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಸಂಘ ಒತ್ತಾಯಿಸಿದೆ.
ದೇಶಾದ್ಯಂತ 83 ಸಂಘ ಶಿಕ್ಷಣ ವರ್ಗಗಳು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳನ್ನು ಆಯೋಜಿಸಲಾಗಿದ್ದು, 18,842 ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಸಂಘದ ತತ್ವಗಳ ಜೊತೆಗೆ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ವಿಪತ್ತು ನಿರ್ವಹಣೆ ಕುರಿತೂ ಮಾರ್ಗದರ್ಶನ ನೀಡಲಾಗಿದೆ ಎಂದು ಅಂಬೇಕರ್ ತಿಳಿಸಿದರು.
ಸಭೆಯಲ್ಲಿ ದೇಶದ ಜನಸಂಖ್ಯೆಯ ಅಸಮತೋಲನ, ಜನಗಣತಿ, ಮಾದಕ ವ್ಯಸನದ ಹೆಚ್ಚಳ ಸೇರಿದಂತೆ ಹಲವು ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೇ ವೇಳೆ ಸಂತ ರವಿದಾಸ್ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳ ಆಯೋಜನೆ ಕುರಿತೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸುನೀಲ್ ಅಂಬೇಕರ್ ಮಾಹಿತಿ ನೀಡಿದರು.



