Sunday, July 12, 2026
Google search engine

Homeರಾಜಕೀಯ‘ಮಂತ್ರಿಗಿರಿ ಯಾರಪ್ಪನ ಆಸ್ತಿಯಲ್ಲ’ : ಸಂಪುಟ ವಿಸ್ತರಣೆ ಬೆನ್ನಲ್ಲೇ ಸರ್ಕಾರಕ್ಕೆ ವಿ.ಎಸ್. ಉಗ್ರಪ್ಪ ಸಲಹೆ

‘ಮಂತ್ರಿಗಿರಿ ಯಾರಪ್ಪನ ಆಸ್ತಿಯಲ್ಲ’ : ಸಂಪುಟ ವಿಸ್ತರಣೆ ಬೆನ್ನಲ್ಲೇ ಸರ್ಕಾರಕ್ಕೆ ವಿ.ಎಸ್. ಉಗ್ರಪ್ಪ ಸಲಹೆ

ಕಾರವಾರ : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಅವರು ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಚಿವ ಸ್ಥಾನ ನೀಡದೆ, ಅರ್ಹತೆ ಹಾಗೂ ಕಾರ್ಯಕ್ಷಮತೆಗೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೂರಾರು ಜನ ಅಯೋಗ್ಯರು, ಅಪ್ರಾಮಾಣಿಕರು, ಕ್ರಿಮಿನಲ್‌ ಹಿನ್ನೆಲೆಯುಳ್ಳವರು ಮತ್ತು ಭ್ರಷ್ಟರು ಮಂತ್ರಿಗಳಾಗುವ ಬದಲು, ನಾಲ್ಕಾರು ಜನ ವಿದ್ಯಾವಂತರು, ದೇಶಪ್ರೇಮಿಗಳು ಹಾಗೂ ವಿಚಾರವಂತರು ಮಂತ್ರಿಗಳಾದರೆ ಮಾತ್ರ ಈ ರಾಜ್ಯ ಮತ್ತು ದೇಶ ಉದ್ಧಾರ ಆಗುತ್ತದೆ. ಜಾತಿ, ಧರ್ಮ ಎನ್ನುವವರಿಗೆ ಮಂತ್ರಿಗಿರಿ ನಿಮ್ಮಪ್ಪನ ಆಸ್ತಿ ಅಲ್ಲ; ಈ ಆಸ್ತಿ ಪಕ್ಷದ್ದು, ಕಾರ್ಯಕರ್ತರದ್ದು ಮತ್ತು ಜನರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಅಗತ್ಯವಿದೆ ಎಂದು ಹೇಳಿದ ಉಗ್ರಪ್ಪ, ದೀರ್ಘಕಾಲ ಸಚಿವ ಸ್ಥಾನ ಅನುಭವಿಸಿರುವ ಹಿರಿಯ ನಾಯಕರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು. ಯುವಕರು ಹಾಗೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕರಿಗೆ ಅವಕಾಶ ನೀಡಿದರೆ ಪಕ್ಷದ ವರ್ಚಸ್ಸು ಹೆಚ್ಚಲಿದೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮರ್ಥರನ್ನು ಗುರುತಿಸಿ ಜವಾಬ್ದಾರಿ ನೀಡುವ ಸಾಮರ್ಥ್ಯವಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿ ಮಟ್ಟದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಹೈಕಮಾಂಡ್‌ನಿಂದ ದೆಹಲಿ ಭೇಟಿ ಸೂಚನೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸ್ತುತ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿಗೆ ಸಂಬಂಧಿಸಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದ್ದು, 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವರ ಆಯ್ಕೆ ನಡೆಯಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

RELATED ARTICLES
- Advertisment -
Google search engine

Most Popular