ನವದೆಹಲಿ : ನೈಋತ್ಯ ಮಾನ್ಸೂನ್ ಆರಂಭವಾಗಿ ಒಂದು ತಿಂಗಳು ಕಳೆದರೂ ದಕ್ಷಿಣ ಭಾರತದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಲಾಶಯಗಳ ಸ್ಥಿತಿ ಹೆಚ್ಚು ಆತಂಕಕಾರಿಯಾಗಿದೆ.
ಕೇಂದ್ರ ಜಲ ಆಯೋಗ (CWC) ಮೇಲ್ವಿಚಾರಣೆ ನಡೆಸುತ್ತಿರುವ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ 47 ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯ 55.288 ಶತಕೋಟಿ ಘನ ಮೀಟರ್ (BCM) ಇದ್ದು, ಜುಲೈ 9ರ ವರದಿ ಪ್ರಕಾರ, ಪ್ರಸ್ತುತ ಒಟ್ಟು ನೀರಿನ ಸಂಗ್ರಹ 13.614 BCM ಇದ್ದು, ಇದು ಒಟ್ಟು ಸಾಮರ್ಥ್ಯದ ಶೇ.24.62ರಷ್ಟಾಗಿದೆ.
ಇದೇ ಅವಧಿಯಲ್ಲಿ ಕಳೆದ ವರ್ಷ ಜಲಾಶಯಗಳಲ್ಲಿ ಶೇ.60.36ರಷ್ಟು ನೀರಿನ ಸಂಗ್ರಹವಿತ್ತು. ಸಾಮಾನ್ಯವಾಗಿ ಈ ಸಮಯದಲ್ಲಿ ಸಂಗ್ರಹ ಪ್ರಮಾಣ ಶೇ.30.18ರಷ್ಟಿರಬೇಕಿತ್ತು ಎಂದು ವರದಿ ತಿಳಿಸಿದೆ.
ಇನ್ನೂ ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದ್ದು, ಇಲ್ಲಿ ಪ್ರಸ್ತುತ ನೀರಿನ ಸಂಗ್ರಹ 2.103 BCM ಇದ್ದು, ಸಾಮಾನ್ಯ ಮಟ್ಟವಾದ 2.787 BCMಗೆ ಹೋಲಿಸಿದರೆ ಶೇ.24.5ರಷ್ಟು ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಶೇ.94.56ರಷ್ಟು ಸಂಗ್ರಹವಿತ್ತು.
ಕರ್ನಾಟಕದಲ್ಲಿಯೂ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, ಪ್ರಸ್ತುತ ಸಂಗ್ರಹ 6.034 BCM ಇದೆ. ಸಾಮಾನ್ಯ ಮಟ್ಟ 8.608 BCM ಹಾಗೂ ಕಳೆದ ವರ್ಷದ ಸಂಗ್ರಹ 16.306 BCM ಆಗಿತ್ತು. ತಮಿಳುನಾಡಿನಲ್ಲಿ ಪ್ರಸ್ತುತ ಸಂಗ್ರಹ 1.5 BCM ಇದ್ದು, ಸಾಮಾನ್ಯ ಮಟ್ಟ 1.858 BCM ಆಗಿದೆ.
ಮಳೆ ಕೊರತೆಯಿಂದ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಕುರುವೈ ಋತುವಿನ ಭತ್ತ ಬಿತ್ತನೆ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಜೂನ್ 12ರಂದು ನೀರಾವರಿಗಾಗಿ ತೆರೆಯಲಾಗುವ ಮೆಟ್ಟೂರು ಅಣೆಕಟ್ಟನ್ನು ಈ ಬಾರಿ ತೆರೆಯಲು ಸಾಧ್ಯವಾಗಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ತಮಿಳುನಾಡು ಸರ್ಕಾರ ಕುರುವೈ ಋತುವಿಗಾಗಿ ₹134 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಕಳೆದ ವರ್ಷ ಮುಂಗಾರು ಬೇಗ ಆರಂಭವಾಗಿ ಉತ್ತಮ ಮಳೆಯೊಂದಿಗೆ ಅಂತ್ಯಗೊಂಡಿದ್ದರೆ, ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾಗಿದ್ದು ಮಳೆಯ ಕೊರತೆ ಎದುರಾಗಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಜಲಾಶಯಗಳ ಸಂಗ್ರಹ ಸಾಮಾನ್ಯಕ್ಕಿಂತ ಕಡಿಮೆಯಿದ್ದರೂ, ಮಧ್ಯ, ಪಶ್ಚಿಮ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಿದೆ.



