Monday, July 13, 2026
Google search engine

Homeರಾಜ್ಯಇ-ಸ್ವತ್ತು 2.0 ಎಡವಟ್ಟು ; ಇ-ಖಾತೆಗಾಗಿ ಜನರ ಪರದಾಟ, ಸರ್ಕಾರದ ವಿರುದ್ಧ ಆಕ್ರೋಶ

ಇ-ಸ್ವತ್ತು 2.0 ಎಡವಟ್ಟು ; ಇ-ಖಾತೆಗಾಗಿ ಜನರ ಪರದಾಟ, ಸರ್ಕಾರದ ವಿರುದ್ಧ ಆಕ್ರೋಶ

ಬೆಂಗಳೂರು : ರಾಜ್ಯದಲ್ಲಿ ಡಿಜಿಟಲ್ ಇ-ಖಾತೆ ವಿತರಣೆಗೆ ಜಾರಿಗೊಳಿಸಿರುವ ‘ಇ-ಸ್ವತ್ತು 2.0’ ತಂತ್ರಾಂಶದ ತಾಂತ್ರಿಕ ದೋಷಗಳಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿ ಆರು-ಏಳು ತಿಂಗಳು ಕಳೆದರೂ ಇ-ಖಾತೆಗಳು ಮಂಜೂರಾಗದೆ, ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆಗಳ ನಡುವೆ ಜನರು ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆಯು ಉಪ ನೋಂದಣಿ ಕಚೇರಿಗಳಲ್ಲಿ ಸ್ಥಿರಾಸ್ತಿ ನೋಂದಣಿಗೆ ಇ-ಖಾತೆಯನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆ, ತಂತ್ರಾಂಶದ ಸಮಸ್ಯೆಯಿಂದ ಹೊಸ ಆಸ್ತಿ ಖರೀದಿ-ಮಾರಾಟ ಪ್ರಕ್ರಿಯೆಗಳೂ ವಿಳಂಬವಾಗುತ್ತಿದ್ದು, ಇದರಿಂದ ಬ್ಯಾಂಕ್ ಸಾಲ, ಆಸ್ತಿ ವರ್ಗಾವಣೆ ಸೇರಿದಂತೆ ಹಲವು ಅಗತ್ಯ ಸೇವೆಗಳು ಅಡಚಣೆಗೆ ಒಳಗಾಗಿವೆ.

ಇನ್ನೂ ಗ್ರಾ.ಪಂ ಅಧಿಕಾರಿಗಳಿಗೂ ಇ-ಸ್ವತ್ತು 2.0 ದೊಡ್ಡ ತಲೆನೋವಾಗಿದ್ದು, ಲೇಔಟ್‌ಗಳಲ್ಲಿ ಖರಾಬು ಭೂಮಿ ಗುರುತಿಸುವುದು, ಜಿಪಿಎಸ್ ಲೊಕೇಶನ್ ಲಭ್ಯವಾಗದಿರುವುದು ಹಾಗೂ ಒಂದೇ ಆಸ್ತಿಗೆ ಬಹು ಮಾಲೀಕರ ಹಕ್ಕು ದಾಖಲಾಗಿರುವಂತಹ ಸಮಸ್ಯೆಗಳು ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿವೆ. ಈಗಾಗಲೇ ಸಲ್ಲಿಸಿರುವ ಅರ್ಜಿಗಳಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಲು ತಂತ್ರಾಂಶದಲ್ಲಿ ಅವಕಾಶವಿಲ್ಲದಿರುವುದೂ ಮತ್ತೊಂದು ಸಮಸ್ಯೆಯಾಗಿದೆ.

ಇನ್ನೊಂದೆಡೆ, ಸಿಟಿಜನ್ ಲಾಗಿನ್ ವ್ಯವಸ್ಥೆಯಲ್ಲೂ ಆಗಾಗ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಖಾಸಗಿ ಸೈಬರ್ ಕೇಂದ್ರಗಳಿಗೆ ಹೆಚ್ಚುವರಿ ಹಣ ನೀಡಿ ಅರ್ಜಿ ಸಲ್ಲಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಈ ಬಗ್ಗೆ ವಿಪಕ್ಷ ನಾಯಕರು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದು, ತಂತ್ರಾಂಶದ ದೋಷಗಳನ್ನು ಕೂಡಲೇ ಸರಿಪಡಿಸಿ, ಅರ್ಜಿಗಳ ವಿಲೇವಾರಿಯನ್ನು ಸರಳ ಮತ್ತು ವೇಗವಾಗಿ ನಡೆಸುವಂತೆ ಒತ್ತಾಯಿಸಿದ್ದಾರೆ. ಸಾರ್ವಜನಿಕರೂ ಖಾಸಗಿ ಏಜೆನ್ಸಿಗಳ ಮೂಲಕ ಅರ್ಜಿ ಅಪ್‌ಲೋಡ್‌ಗೆ ಅವಕಾಶ ನೀಡುವ ಜೊತೆಗೆ, ಇ-ಸ್ವತ್ತು 2.0 ವ್ಯವಸ್ಥೆಯನ್ನು ತಕ್ಷಣ ಸುಧಾರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular