ವಿಜಯಪುರ : ಕರ್ನಾಟಕ ಬಿಜೆಪಿಯ ಆಂತರಿಕ ಭಿನ್ನಮತ ಮತ್ತೊಮ್ಮೆ ಬಹಿರಂಗವಾಗಿದ್ದು, ಹಿರಿಯ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ನಿರೀಕ್ಷಿತ ಬದಲಾವಣೆ ಆಗದಿದ್ದರೆ ಪಕ್ಷಕ್ಕೆ ಭಾರೀ ಹಿನ್ನಡೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ರಾಜ್ಯ ಬಿಜೆಪಿಯಲ್ಲಿ ‘ನವೆಂಬರ್ ಕ್ರಾಂತಿ’ ನಡೆಯದಿದ್ದರೆ ಪಕ್ಷ ಸರ್ವನಾಶವಾಗಲಿದೆ. ವಿಜಯೇಂದ್ರ ಅವರ ನೇತೃತ್ವ ಮುಂದುವರಿದರೆ ರಾಜ್ಯದಲ್ಲಿ ಬಿಜೆಪಿ ತನ್ನ ನೆಲೆಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ಯತ್ನಾಳ್ ಹೇಳಿದರು.
ಇದೇ ವೇಳೆ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕೃತಕವಾಗಿ ಹಳೆಯ ದಿನಾಂಕ ನಮೂದಿಸಿ ವಿಪ್ ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಳೆಯ ನಕಲಿ ಸಹಿ ಪ್ರಕರಣವನ್ನು ಪ್ರಸ್ತಾಪಿಸುವ ಭಯದಿಂದಲೇ ವಿಜಯೇಂದ್ರ ಕಾಂಗ್ರೆಸ್ ನಾಯಕರ ಮುಂದೆ ಮಣಿದಿದ್ದಾರೆ ಎಂದು ಟೀಕಿಸಿದರು. ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಮುಂದೆ ತಲೆಬಾಗುತ್ತಿರುವ ಕಾರಣವೇ ಇಂತಹ ಕ್ರಮಗಳಿಗೆ ಕಾರಣವಾಗಿದೆ ಎಂದು ದೂರಿದರು.
ಪಕ್ಷದ ಕಾರ್ಯಕ್ರಮಗಳಿಗೆ ಜನಬೆಂಬಲ ಇಲ್ಲ ಎಂದು ಲೇವಡಿ ಮಾಡಿದ ಯತ್ನಾಳ್, ರಟ್ಟಿಹಳ್ಳಿಯಲ್ಲಿ ನಡೆದ ವಿಜಯೇಂದ್ರ ಕಾರ್ಯಕ್ರಮದಲ್ಲಿ ಅಲ್ಪ ಸಂಖ್ಯೆಯ ಜನ ಮಾತ್ರ ಭಾಗವಹಿಸಿದ್ದರು. ಆದರೆ ತಾವು ಭಾಗವಹಿಸುವ ಕಾರ್ಯಕ್ರಮಗಳಿಗೆ ಸಾವಿರಾರು ಜನರು ಸೇರುತ್ತಾರೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ಕ್ಷೇತ್ರದಲ್ಲಿ ನಡೆದ ಹಿಂದೂ ಯುವಕನ ಕೊಲೆ ಪ್ರಕರಣದ ಬಳಿಕ ಅವರ ಕುಟುಂಬವನ್ನು ಭೇಟಿಯಾಗದಿರುವುದನ್ನೂ ಅವರು ಪ್ರಶ್ನಿಸಿದರು. ಇಂತಹ ನಾಯಕತ್ವವನ್ನು ಮುಂದುವರಿಸುವ ನಿರ್ಧಾರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಉಸ್ತುವಾರಿ ಅರುಣ್ ಸಿಂಗ್ ಕಾರ್ಯಕರ್ತರ ಅಳಲು ಆಲಿಸದೇ ಕೇವಲ ವಿಜಯೇಂದ್ರ ಪರವಾಗಿಯೇ ನಡೆದುಕೊಂಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಿದ ಯತ್ನಾಳ್, ತಾವು ಮುಂಚಿತವಾಗಿಯೇ ಬಿಜೆಪಿಗೆ ನಿಷ್ಠೆಯಿಂದ ಮತ ಚಲಾಯಿಸುವುದಾಗಿ ಪತ್ರ ಬರೆದಿರಲಿಲ್ಲವಾದರೆ ಕಾಂಗ್ರೆಸ್ಗೆ ಮತ ಹಾಕಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದರು. ಬಿಜೆಪಿ ಶಾಸಕರಿಗೆ ಸರ್ಕಾರದಿಂದ ಸಿಗುವ ಅನುದಾನವನ್ನು ಗಮನಿಸಿದರೆ ಯಾರು ಯಾರೊಂದಿಗೆ ಕೈಜೋಡಿಸಿದ್ದಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.



