ರಮ್ಮಿ ಕ್ಲಬ್‌ನಲ್ಲೇ ದಾಳಿ ನಡೆಸಿ ಹತ್ಯೆಗೆ ಯತ್ನ; ಫೋರೆನ್ಸಿಕ್ ತಂಡದಿಂದ ಸ್ಥಳ ಪರಿಶೀಲನೆ.
ವರದಿ: ಸ್ಟೀಫನ್ ಜೇಮ್ಸ್.
ಬೆಳಗಾವಿ, ಜು. 15: ನಗರದ ಯೂನಿಯನ್ ಜಿಮಖಾನಾ ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣವು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ರಮ್ಮಿ ಆಡುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದೊಂದಿಗೆ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರೇಶ್ ಜಾಲಗಾರ ಎಂಬಾತ ಕ್ಲಬ್‌ನೊಳಗೆ ರಮ್ಮಿ ಆಟದಲ್ಲಿ ತೊಡಗಿದ್ದ ವೇಳೆ ಐವರು ದುಷ್ಕರ್ಮಿಗಳು ಸ್ಥಳಕ್ಕೆ ಬಂದಿದ್ದಾರೆ. ಅವರಲ್ಲಿ ಮೂವರು ಕ್ಲಬ್ ಒಳಗೆ ಪ್ರವೇಶಿಸಿದ್ದು, ಇಬ್ಬರು ಹೊರಭಾಗದಲ್ಲೇ ಕಾವಲು ನಿಂತಿದ್ದರು ಎನ್ನಲಾಗಿದೆ.
ಒಳಗೆ ನುಗ್ಗಿದ ಆರೋಪಿಗಳಲ್ಲಿ ಒಬ್ಬ ಸುರೇಶ್ ಅವರ ತಲೆಗೆ ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಸಮಯಪ್ರಜ್ಞೆ ಪ್ರದರ್ಶಿಸಿದ ಸುರೇಶ್ ಆರೋಪಿಯನ್ನು ತಳ್ಳಿಹಾಕಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗುರಿ ತಪ್ಪಿದ ನಂತರ ದುಷ್ಕರ್ಮಿಗಳು ಕ್ಲಬ್‌ನ ಹೊರಭಾಗಕ್ಕೆ ಬಂದು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಿಂದ ಕೆಲಕಾಲ ಜಿಮಖಾನಾ ಕ್ಲಬ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳವನ್ನು ಭದ್ರತಾ ವಲಯಕ್ಕೆ ತೆಗೆದುಕೊಂಡ ಪೊಲೀಸರು, ಪ್ರಾದೇಶಿಕ ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರ ತಂಡವನ್ನು ಕರೆಸಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿತು.
ಫೋರೆನ್ಸಿಕ್ ತಜ್ಞರು ಗುಂಡಿನ ಚಿಪ್ಪುಗಳು, ಇತರೆ ಭೌತಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪ್ರಕರಣದ ತನಿಖೆಗೆ ಅಗತ್ಯ ಮಾಹಿತಿಯನ್ನು ಕಲೆಹಾಕಿದ್ದಾರೆ.
ಇದೇ ವೇಳೆ ಸುರೇಶ್ ಅವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದು ನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ದಾಳಿಯ ಹಿಂದಿನ ವೈಷಮ್ಯ, ಹಣಕಾಸಿನ ವ್ಯವಹಾರ ಅಥವಾ ಇತರೆ ಕಾರಣಗಳ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದು, ಕ್ಲಬ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.



