ತಮಿಳು ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಮತ್ತೆ ಸೆನ್ಸಾರ್ ಮಂಡಳಿಯ ಮುಂದೆ ಹೋಗಿದೆ. ಈಗಾಗಲೇ ಸಿಬಿಎಫ್ಸಿ (CBFC)ಯಿಂದ ‘ಎ’ ಪ್ರಮಾಣಪತ್ರ ಪಡೆದಿದ್ದರೂ, ಸಿನಿಮಾದಲ್ಲಿ ಮಾಡಲಾದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ಮರು-ಪ್ರಮಾಣೀಕರಣಕ್ಕೆ ಕಳುಹಿಸಲಾಗಿದೆ.
ವರದಿಗಳ ಪ್ರಕಾರ ನಿರ್ದೇಶಕ ಎಚ್.ವಿನೋತ್ ಅವರ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕೆ 41 ಸೆಕೆಂಡ್ಗಳ ಹೆಚ್ಚುವರಿ ಸಮಯ ಸೇರ್ಪಡೆಯಾಗಿದ್ದು, ಚಿತ್ರದ ಹೊಸ ಅವಧಿ 3 ಗಂಟೆ 3 ನಿಮಿಷ 52 ಸೆಕೆಂಡ್ಗಳಿಗೆ (183.52 ನಿಮಿಷ) ಏರಿಕೆಯಾಗಿದೆ. ಮರು ಸೆನ್ಸಾರ್ ನಂತರವೂ ಸಿನಿಮಾದ ‘ಎ’ ರೇಟಿಂಗ್ ಮುಂದುವರಿದಿದೆ.
ಹೊಸ ಸೆನ್ಸಾರ್ ಪ್ರಮಾಣಪತ್ರದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೆಚ್ಚುವರಿ ದೃಶ್ಯಗಳು ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಜುಲೈ 23 ಅಥವಾ 24ರಂದು ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅಧಿಕೃತ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.
ಮಾಹಿತಿಗಳ ಪ್ರಕಾರ, ಹೆಚ್ಚುವರಿ ಸಮಯವು ಸಿನಿಮಾದ ಕಥೆಗೆ ಸಂಬಂಧಿಸಿದ ಹೊಸ ದೃಶ್ಯವಲ್ಲ. ವಿಜಯ್ ಅವರ ಮನವಿಯ ಮೇರೆಗೆ ಟೈಟಲ್ ಕಾರ್ಡ್ನಲ್ಲಿ ಕೆಲವು ಹೆಸರುಗಳನ್ನು ಸೇರಿಸಲಾಗಿದ್ದು, ಇದರಿಂದ ಸುಮಾರು 24 ಸೆಕೆಂಡ್ಗಳ ಹೆಚ್ಚುವರಿ ಸಮಯ ಸೇರ್ಪಡೆಯಾಗಿದೆ ಎನ್ನಲಾಗಿದೆ. ಯಾವುದೇ ಬದಲಾವಣೆಯಾದರೂ ನಿಯಮದ ಪ್ರಕಾರ ಮರು ಸೆನ್ಸಾರ್ ಅಗತ್ಯವಾಗಿರುವುದರಿಂದ ಚಿತ್ರ ಮತ್ತೆ ಮಂಡಳಿಯ ಮುಂದೆ ಹೋಗಿದೆ.
ಭಾರತದಲ್ಲಿ ಕೆಲವು ಕಟ್ಗಳು ಮತ್ತು ಬದಲಾವಣೆಗಳೊಂದಿಗೆ ಸಿನಿಮಾ ಬಿಡುಗಡೆಯಾಗಲಿದ್ದು, ಯುಕೆ ವಿತರಕರು ಯಾವುದೇ ಕಟ್ಗಳಿಲ್ಲದೆ ಮೂಲ ರೂಪದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ದೊಡ್ಡ ತಾರಾಬಳಗದ ‘ಜನ ನಾಯಗನ್’ : ಎಚ್.ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೈನ್ ಮತ್ತು ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ. ನಾರಾಯಣ ನಿರ್ಮಾಣದ ಈ ಸಿನಿಮಾ ವಿಜಯ್ ಅವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.



